ವಿಜಯಪುರ: ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ಕಾರ್ಮಿಕರು ಸಿಲುಕಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರ ಶವವನ್ನು ಹೊರತೆಗೆಯಲಾಗಿದೆ.
ನಿನ್ನೆ ರಾತ್ರಿ ಮೆಕ್ಕೇಜೋಳ ಸಂಸ್ಕರಣಾ ಘಟಕ ಕುಸಿದು ಸುಮಾರು 200 ಟನ್ ಮೆಕ್ಕೆಜೋಳ ರಾಶಿಯೊಳಗೆ ಹತ್ತಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಎರಡು ಎಸ್ ಡಿ ಆರ್ ಎಫ್ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಾಲ್ವರು ಕಾರ್ಮಿಕರನ್ನು ರಕ್ಷಿಸಲಾಗಿದೆ.
ದುರಂತದಲ್ಲಿ 6-7 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಈವರೆಗೆ 6 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಘಟನಾ ಸ್ಥಳದಲ್ಲಿ ಕಾರ್ಮಿಕರ ಕುಟುಂಬದವರು ಪ್ರತಿಭಟನೆ ನಡೆಸಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಚಿವ ಎಂ.ಬಿ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.