ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ರೈತರ ಭೂಮಿಯಲ್ಲಿ ವಕ್ಫ್ ಬೋರ್ಡ್ ಸೇರ್ಪಡೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸಚಿವ ಎಂ.ಬಿ.ಪಾಟೀಲ್, ಗೆಜೆಟ್ ನೊಟಿಫಿಕೇಷನ್ ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ರೈತರು ಭಯಪಡುವ ಅಗತ್ಯವಿಲ್ಲ. ಹೊನವಾಡ ಗ್ರಾಮದಲ್ಲಿ ಕೇವಲ 10 ಎಕರೆ ಮಾತ್ರ ವಕ್ಫ್ ಆಸ್ತಿಯಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮಾತನಾಡುತ್ತೇನೆ ಎಂದಿದ್ದಾರೆ.
ಹಿನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ ವಕ್ಫ್ ಹೆಸರಲ್ಲಿ ಆಗಿದೆ ಎಂಬ ಸುದ್ದಿ ಹಬ್ಬಿಸಲಾಗಿದೆ. ಆದರೆ ಈ ರೀತಿ ಎಲ್ಲಿಯೂ ಆಗಿಲ್ಲ. ಹೊನವಾಡದಲ್ಲಿ ಈ ಬಗ್ಗೆ ಯಾವುದೇ ರೈತರಿಗೆ ನೋಟಿಸ್ ಕೊಟ್ಟಿಲ್ಲ. ಕೇವಲ 10 ಎಕರೆ ಮಾತ್ರ ವಕ್ಫ್ ಆಸ್ತಿಯಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.