ಬೆಂಗಳೂರು: ರಾಜ್ಯದಲ್ಲಿ ಮತ್ತೆ ಜಿಲ್ಲೆಗಳ ಹೆಸರು ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಬಗ್ಗೆ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಸಚಿವ ಎಂ.ಬಿ.ಪಾಟೀಲ್, ವಿಜಯಪುರ ಜಿಲ್ಲೆ ಹೆಸರು ಬದಲಾವಣೆ ಮಾಡುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ವಿಜಯಪುರ ಜಿಲ್ಲೆ ಮೊದಲು ಬಿಜಾಪುರ ಜಿಲ್ಲೆಯಾಗಿತ್ತು. ಈಗ ಬಸವೇಶ್ವರ ಜಿಲ್ಲೆ ಎಂದಾಗಲಿ ಅದರಲ್ಲಿ ತಪ್ಪೇನು? ಎಂದರು.
ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮ ನಾಡು ಬಸವನಾಡು, ಬಸವ ಸಂಸ್ಕೃತಿ ಆಗಬೇಕು. ಈ ಮಾತನ್ನು ಹಲವಾರು ಬಾರಿ ಹೇಳಿದ್ದೇವೆ. ವಿಜಯಪುರ ಹೆಸರು ಬದಲಾವಣೆ ಬಗ್ಗೆ ಶೀಘ್ರದಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಇನ್ನು ನಮ್ಮ ಮೆಟ್ರೋಗೆ ಬಸವೇಶ್ವರ ಮೆಟ್ರೋ ಎಂದು ಹೆಸರಿಡಲು ಮನವಿ ಬಂದಿದೆ. ಈ ಬಗ್ಗೆಯೂ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.