ವಿಜಯಪುರ: ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ಬಳಿಕ ತಾಯಿ ತಾನು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ನೀರುಪಾಲಾಗಿರುವ ನಾಲ್ವರು ಮಕ್ಕಳು ಮೃತಪಟ್ಟಿದ್ದು, ಅವರಲ್ಲಿ ಇಬ್ಬರು ಅವಳಿ ಮಕ್ಕಳ ಶವ ಪತ್ತೆಯಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಬಳಿ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಭಾಗ್ಯಮ್ಮ ಎಂಬ ಮಹಿಳೆ ತನ್ನ ನಾಲ್ವರು ಮಕ್ಕಳನ್ನು ಎಸೆದು ಬಳಿಕ ತಾನೂ ಕಾಲುಗೆ ಹಾರಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕಾಲುವೆಗೆ ಹಾರಿದ್ದ ತಾಯಿಯನ್ನು ರಕ್ಷಿಸಿದ್ದಾರೆ. ಆದರೆ ನಾಲ್ವರು ಮಕ್ಕಳು ನೀರುಪಾಲಾಗಿ ಸಾವನ್ನಪ್ಪಿದ್ದಾರೆ.
ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸೇನ್ ನಿಂಗರಾಜ ಭಜಂತ್ರಿ (2) ಹಾಗೂ ಹುಸೇನ್ ನಿಂಗರಾಜು ಭಜಂತ್ರಿ (2) ಮೃತ ಮಕ್ಕಳು. ಇಬ್ಬರು ಅವಳಿ ಗಂಡು ಮಕ್ಕಳಾಗಿದ್ದು, ಇಬ್ಬರು ಹೆಣ್ಣು ಮಕ್ಕಳಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಮಕ ಸಿಬ್ಬಂದಿ ದೌಡಾಯಿಸಿ ನೀರುಪಾಲಾಗಿದ್ದ ಇಬ್ಬರು ಅವಳಿ ಗಂಡುಮಕ್ಕಳ ಶವ ಹೊರತೆಗಿದ್ದಾರೆ.
ಇಬ್ಬರು ಹೆಣ್ಣುಮಕ್ಕಳ ಶವಕ್ಕಾಗಿ ಕಾಲುವೆ ನೀರಲ್ಲಿ ಶೋಧ ನಡೆಸಲಾಗಿದೆ. ಮೃತ ಮಕ್ಕಳು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದವರು ಎಂದು ತಿಳಿದುಬಂದಿದೆ. ಅಣ್ಣ-ತಮ್ಮನ ನಡುವಿನ ಆಸ್ತಿ ಕಲಹದಿಂದ ಕೌಟುಂಬಿಕ ಜಗಳವುಂಟಾಗಿದ್ದು ಇದರಿಂದ ಬೇಸತ್ತ ಭಾಗ್ಯಮ್ಮ ದುಡುಕಿನ ನಿರ್ಧಾರ ಕೈಗೊಂಡು, ಮಕ್ಕಳ ಸಾವಿಗೆ ಕಾರಣವಾಗಿದ್ದಾಳೆ ಎನ್ನಲಾಗಿದೆ.