
ವಿಜಯಪುರ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿಸಿಲ ಝಳ ಹೆಚ್ಚಾಗಿದ್ದು, ಜನರು ಬಸವಳಿದು ಹೋಗಿದ್ದಾರೆ. ಈ ನಡುವೆ ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ವರುಣಾರ್ಭಟಕ್ಕೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಬೊಮ್ಮನಹಳ್ಳಿಯಲ್ಲಿ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ವರುಣಾರ್ಭಟಕ್ಕೆ ಮುರುಗೆಪ್ಪ ಚೌಗುಲಾ ಎಂಬುವವರ ಬಾಳೆ ಬೆಳೆ ನಾಶವಾಗಿದೆ.
ತೀವ್ರ ಬರಗಾಲ, ನೀರಿನ ಸಮಸ್ಯೆ ನಡುವೆಯೂ ಕಷ್ಟಪಟ್ಟು ಬಾಳೆ ಬೆಳೆ ಬೆಳೆದಿದ್ದ ರೈತರಿಗೆ ಏಕಾಏಕಿ ಬಿರುಗಾಳಿ ಸಹಿತ ಭಾರಿ ಮಳೆ ಮತ್ತೊಂದು ಸಮಸ್ಯೆ ತಂದೊಡ್ಡಿದೆ. ಬೆಳೆ ನಾಶವಾಗಿದ್ದಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.