ವಿಜಯಪುರ: 75ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸುತ್ತಿದ್ದ ವೇಳೆ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.
ಇಂಡಿ ತಾಲೂಕಿನ ಹಿರೇರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕನ್ನಡ ಪರ ಸಂಘಟನೆಯ ಮುಖಂಡ ಮಲ್ಲು ಗಿನ್ನಿ ಎಂಬಾತ ಗಾಳಿಯಲ್ಲಿ ಗುಂಡು ಹೊಡೆಯಲು ಹೋಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಂಚಾಯಿತಿ ಎದುರಿಗೆ ಕನ್ನಡಪರ ಸಂಘಟನೆ ಮುಖಂಡ ಮಲ್ಲು ಗಿನ್ನಿ ಏಕಾಏಕಿ ಗುಂಡು ಹಾರಿಸಿದ್ದಾನೆ. ಗುಂಡೇಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ತೊಡೆ ಭಾಗಕ್ಕೆ ತಗುಲಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಗಾಯಾಳು ಸೋಮವ್ವಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆ ಆರೋಪಿ ಮಲ್ಲು ಗಿನ್ನಿ ಸ್ಥಳದಿಂದ ಪರಾರಿಯಾಗಿದ್ದಾನೆ. ಯಾವ ಕಾರಣಕ್ಕೆ ಆರೋಪಿ ಗುಂಡು ಹಾರಿಸಿದ ಎಂಬ ಬಗ್ಗೆ ನಿಖರವಾಗಿ ಮಾಹಿತಿ ಇಲ್ಲ. ಆರೋಪಿ ಪತ್ತೆಗೆ ಬಲೆ ಬೀಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.