ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಇಂದು ನಡೆಯಲಿದೆ. 2022ರ ಅಕ್ಟೋಬರ್ 22ರಂದು ನಗರಪಾಲಿಕೆಗೆ ಚುನಾವಣೆ ನಡೆದಿದ್ದು, ಮೇಯರ್ ಮೀಸಲಾತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಂತರ ಮೇಯರ್ ಚುನಾವಣೆಗೆ ಹೈಕೋರ್ಟ್ ಅನುಮತಿ ನೀಡಿದೆ.
ಕಲಬುರಗಿ ಹೈಕೋರ್ಟ್ ಪೀಠದಿಂದ ಚುನಾವಣೆಗೆ ಹಸಿರು ನಿಶಾನೆ ತೋರಲಾಗಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದಂತೆ ಇಂದು ಚುನಾವಣೆ ನಡೆಯಲಿದೆ. ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಒಟ್ಟು 35 ಸದಸ್ಯ ಬಲ ಇದೆ. ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರರು 5, ಎಐಎಂಐಎಂ 2, ಜೆ.ಡಿಎಸ್ 1 ಸದಸ್ಯ ಬಲ ಹೊಂದಿವೆ.
ಪಾಲಿಕೆ ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ರಾಜಕೀಯ ಚಾಣಾಕ್ಷತೆ ತೋರಿದ್ದು, ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
ಕಾಂಗ್ರೆಸ್ ಶಾಸಕರಾದ ಎಂ.ಬಿ. ಪಾಟೀಲ್, ವಿಠಲ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲ್ ಗೌಡ, ಪಾಟೀಲ್, ಪ್ರಕಾಶ್ ರಾಥೋಡ್, ನಗರ ಪಾಲಿಕೆ ಸದಸ್ಯರು ಸೇರಿ ಕಾಂಗ್ರೆಸ್ ನಲ್ಲಿ 22ರ ಮತಗಳಿವೆ. ಬಿಜೆಪಿ 17 ಪಾಲಿಕೆ ಸದಸ್ಯರ ಪೈಕಿ ಒಬ್ಬರು ನಿಧನರಾಗಿದ್ದಾರೆ. ವಾರ್ಡ್ ನಂಬರ್ 19ರ ಸದಸ್ಯ ವಿಜಯಕುಮಾರ ಬಿರಾದಾರ ನಿಧನರಾಗಿದ್ದಾರೆ. ಶಾಸಕ ಯತ್ನಾಳ್, ಸಂಸದ ಜಿಗಜಿಣಗಿ ಸೇರಿ ಬಿಜೆಪಿ ಬಳಿ 18 ಮತಗಳಿವೆ.