
ವಿಜಯನಗರ: ಆರೋಗ್ಯಾಧಿಕಾರಿಗಳಿಬ್ಬರ ಪ್ರೇಮ ವಿವಾಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಇಟಗಿಯಲ್ಲಿ ನಡೆದಿದೆ.
ಶ್ರೀಕಾಂತ್ ಹಾಗೂ ಡಿಂಪಲ್ ಎಂಬ ಇಬ್ಬರು ಆರೋಗ್ಯಾಧಿಕಾರಿಗಳು ಪರಸ್ಪರ ಪ್ರೀತಿಸಿ ವರ್ಷದ ಹಿಂದೆ ವಿವಾಹವಾಗಿದ್ದರು. ಆದರೆ ಪತಿ-ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ನೆಲ್ಲಕುದರಿ ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದ ಶ್ರೀಕಾಂತ್, ಉಲವತ್ತು ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದ ಡಿಂಪಲ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದ. ಕೆಲ ದಿನಗಳಿಂದ ಇಬ್ಬರ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಅದೇ ರೀತಿ ಇಂದು ಕೂಡ ಇಬ್ಬರ ನಡುವೆ ವಾಗ್ವಾದ, ಮಾತಿಗೆ ಮಾತು ಬೆಳೆದು ಪತಿ ಶ್ರೀಕಾಂತ್ ಪತ್ನಿಯ ಕತ್ತು ಹಿಸುಕಿ ಕೊಂದೇ ಬಿಟ್ಟಿದ್ದಾನೆ. 28 ವರ್ಷದ ಡಿಂಪಲ್ ಪತಿಯಿಂದಲೇ ಕೊಲೆಯಾಗಿದ್ದಾಳೆ.
ಇಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಸಿ ವಿವಾಹವಾಗಿದ್ದ ಆರೋಗ್ಯಾಧಿಕಾರಿ ಪತ್ನಿಯನ್ನೇ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾದರೂ ಯಾಕೆ? ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ.