ಮುಂಬೈ: 180 ಕೋಟಿ ರೂ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಸಿಬಿಐ ಕೋರ್ಟ್ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ.
ಬಹುಕೋಟಿ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳ ಹಿಂದೆ ದೇಶ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ವಿರುದ್ಧ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದ್ದು, ವಿಜಯ್ ಮಲ್ಯರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸುವಂತೆ ಸೂಚಿಸಿದೆ.
ವಿಜಯ್ ಮಲ್ಯ ವಿರುದ್ಧ ಈಗಾಗಲೇ ಬೇರೆ ಬೇರೆ ಕೋರ್ಟ್ ಗಳು ವಾರಂಟ್ ಜಾರಿ ಮಾಡಿದ್ದವು. ಇದೀಗ ಸಿಬಿಐ ಕೋರ್ಟ್ ಓಪನ್ ಎಂಡೆಡ್ ವಾರಂಟ್ ಹೊರಡಿಸಿದ್ದು, ಗಡುವು ಇಲ್ಲದ ವಾರೆಂಟ್ ಇದಾಗಿದ್ದು, ಗಂಭೀರ ಸ್ವರೂಪದ್ದಾಗಿದೆ.
ಲಂಡನ್ ನಲ್ಲಿರುವ ವಿಜಯ್ ಮಲ್ಯ ಕಿಂಗ್ ಫಿಶರ್ ಏರ್ ಲೈನ್ಸ್ ಮಾಲೀಕರಾಗಿದ್ದಾಗ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಿಂದ ಪಡೆದಿದ್ದ ಸಾಲ ತೀರಿಸಿಲ್ಲ. ಇದರಿಂದ ಬ್ಯಾಂಕ್ ಗೆ 180 ಕೋಟಿಗೂ ಅಧಿಕ ನಷ್ಟವುಂಟಾಗಿದೆ. ಈ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಬ್ಯಾಂಕ್ ನಿಂದ ಪಡೆದ ಸಾಲವನ್ನು ಉದ್ದೇಶಿತ ಕೆಲಸದ ಹೊರತಾಗಿ ಬೇರೆ ಬೇರೆ ಕಡೆ ವಿಜಯ್ ಮಲ್ಯ ವರ್ಗಾವಣೆ ಮಾಡಿದ್ದಾರೆ ಎಂದು ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ವಿಜಯ್ ಮಲ್ಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮಾತ್ರವಲ್ಲ ಇನ್ನೂ ಹಲವು ಬ್ಯಾಂಕ್ ಗಳಿಂದ ಸಾಲ ಪಡೆದು ವಂಚಸಿರುವ ಆರೋಪಗಳಿವೆ.
ಸದ್ಯ ಮುಂಬೈ ಸಿಬಿಐ ಕೋರ್ಟ್ ನ್ಯಾಯಾಧೀಶ ಎಸ್.ಪಿ.ನಾಯ್ಕ್ ನಿಂಬಾಳ್ಕರ್ ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.