ಒಂದು ಕಾಲದಲ್ಲಿ ಜಗತ್ತಿನ ಪ್ರಖ್ಯಾತ ವ್ಯಾಪಾರಸ್ಥರಾಗಿದ್ದವರ ಪೈಕಿ ಇಂದು ಹಲವರು ದಿವಾಳಿ ಅಂಚಿಗೆ ಬಂದಿದ್ದಾರೆ. ಡಾಲರ್ ಲೆಕ್ಕದಲ್ಲಿ ವ್ಯವಹಾರ ನಡೆಸ್ತಿದ್ದವರು ಸಾಲದ ಹೊರೆಯಲ್ಲಿ ಸಿಕ್ಕು ಪೈಸೆಗೂ ಪರದಾಡುವಂತಾಗಿದೆ. ಇಂತಹ ಭಾರತದ ಟಾಪ್ 5 ಬಿಲಿಯನೇರ್‌ಗಳ ಪಟ್ಟಿ ಇಲ್ಲಿದೆ.
* ಸಿಂಗ್ ಬ್ರದರ್ಸ್
ಒಮ್ಮೆ, ಇಬ್ಬರು ಸಿಂಗ್ ಸಹೋದರರು ಭಾರತೀಯರ ಸಾಧನೆಯ ಸಂಕೇತಗಳಾಗಿ ವಿದೇಶದಲ್ಲಿ ತಮ್ಮ ಯಶಸ್ಸಿಗೆ ಹೆಸರುವಾಸಿಯಾಗಿದ್ದರು. ರಾನ್‌ಬಾಕ್ಸಿಯ ಪ್ರವರ್ತಕರಾದ, ಮಲ್ವಿಂದರ್ ಸಿಂಗ್ ಮತ್ತು ಶಿವಿಂದರ್ ಸಿಂಗ್ 2015 ರಲ್ಲಿ ಭಾರತದ ಶ್ರೀಮಂತ ಜನರಲ್ಲಿ 35 ನೇ ಸ್ಥಾನದಲ್ಲಿದ್ದರು. ಆ ಸಮಯದಲ್ಲಿ $ 2.5 ಶತಕೋಟಿ ಅಥವಾ ರೂ 20,000 ಕೋಟಿಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಅವರ ವ್ಯಾಪಾರ ಹೊಂದಿತ್ತು. ಆದಾಗ್ಯೂ ಮರುವರ್ಷ ಅವರು 13,000 ಕೋಟಿ ರೂ.ಗಳ ಸಾಲದ ಹೊರೆ ಹೊತ್ತುಕೊಂಡರು. 2008 ರಲ್ಲಿ ಅವರು ರಾನ್ ಬಾಕ್ಸಿಯಲ್ಲಿನ ತಮ್ಮ ಪಾಲನ್ನು ಜಪಾನಿನ ಕಂಪನಿಗೆ ಮಾರಾಟ ಮಾಡಿದರು. ಆದಾಯ ದುರುಪಯೋಗ, ವ್ಯಾಪಾರದ ಕುಸಿತದಿಂದ ತಮ್ಮ ಖ್ಯಾತಿ ಕಳೆದುಕೊಂಡು ಕಳಂಕ ಎದುರಿಸಿದರು.
* ವಿಜಯ್ ಮಲ್ಯ
ಕಿಂಗ್ ಆಫ್ ಗುಡ್ ಟೈಮ್ಸ್ ಎಂದು ಕರೆಯಲ್ಪಡುವ ವಿಜಯ್ ಮಲ್ಯ ಓರ್ವ ಉದ್ಯಮಿಯಾಗಿದ್ದು, ಗ್ಲಾಮರಸ್ ಇಮೇಜ್ ಹೊಂದಿದ್ದರು. ಸುಂದರ ಮಹಿಳೆಯರೊಂದಿಗೆ ಪಾರ್ಟಿಗಳಲ್ಲಿ ಕಾಣಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು. ಮಲ್ಯ ಕಿಂಗ್‌ಫಿಶರ್ ಏರ್‌ಲೈನ್ಸ್, ಯುನೈಟೆಡ್ ಸ್ಪಿರಿಟ್ಸ್ (ಕಿಂಗ್‌ಫಿಶರ್ ಬಿಯರ್ ಉತ್ಪಾದನೆ), ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಮತ್ತು ಬರ್ಗರ್ ಪೇಂಟ್ಸ್ ನಂತಹ ಕಂಪನಿಗಳನ್ನು ಹೊಂದಿದ್ದರು. 17 ಬ್ಯಾಂಕ್‌ಗಳಲ್ಲಿ 9,000 ಕೋಟಿ ಸಾಲ ಪಡೆದು ತೀರಿಸಲಾಗದೇ ದೇಶ ತೊರೆದರು. ಭಾರತ ಸರ್ಕಾರ ಮಲ್ಯನನ್ನು ಪರಾರಿಯಾದ ವ್ಯಕ್ತಿ ಎಂದು ಘೋಷಿಸಿದ್ದು ಭಾರತದಲ್ಲಿನ ಅವರ ಅನೇಕ ಆಸ್ತಿಗಳನ್ನು ಹರಾಜು ಮಾಡಲಾಗಿದೆ.
*ಮೆಹುಲ್ ಚೋಕ್ಸಿ
ಗೀತಾಂಜಲಿ ಜ್ಯುವೆಲ್ಲರಿ ಮಾಲೀಕ ಮೆಹುಲ್ ಚೋಕ್ಸಿ ಕೂಡ ಪರಾರಿಯಾಗಿದ್ದಾರೆ ಎಂದು ಘೋಷಿಸಲಾಗಿದೆ. ಐದು ವರ್ಷಗಳ ಹಿಂದೆಯಷ್ಟೇ ದೇಶಾದ್ಯಂತ 4,000 ಮಳಿಗೆಗಳನ್ನು ಹೊಂದಿದ್ದ ಅವರ ನಿವ್ವಳ ಮೌಲ್ಯ 1,150 ಕೋಟಿ ರೂ. ಅವರ ಬಳಿ ಈಗ ಕೇವಲ 23 ಕೋಟಿ ಆಸ್ತಿ ಮಾತ್ರ ಉಳಿದಿದೆ ಎಂದು ವರದಿಗಳು ತಿಳಿಸಿವೆ. 13,500 ಕೋಟಿ ರೂ. ಪಿಎನ್‌ಬಿ ಹಗರಣದಲ್ಲಿ ತನ್ನ ಸೋದರಳಿಯನೊಂದಿಗೆ ಆರೋಪಿಯಾಗಿದ್ದ ಅವರು 2017 ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ಪೌರತ್ವ ಪಡೆದ ನಂತರ ದೇಶದಿಂದ ಪಲಾಯನ ಮಾಡಿದರು.
*ನೀರವ್ ಮೋದಿ
ಮೆಹುಲ್ ಚೋಕ್ಸಿಯ ಸೋದರಳಿಯ, ಪಿಎನ್‌ಬಿ ಹಗರಣದ ಮಾಸ್ಟರ್‌ಮೈಂಡ್ ಎಂದು ಕರೆಯಲ್ಪಡುವ ನೀರವ್ ಮೋದಿ ವಜ್ರದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಐದು ವರ್ಷಗಳ ಹಿಂದೆ ಅವರು 13,000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರು. ಆದರೆ ಇಂದು ಅವರು 30,000 ಕೋಟಿ ರೂ.ಗೂ ಹೆಚ್ಚು ಸಾಲವನ್ನು ಹೊಂದಿದ್ದು ಲಂಡನ್ ಪೊಲೀಸರ ವಶದಲ್ಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದಿಂದ ಹಿಡಿದು ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.
*ರಾಣಾ ಕಪೂರ್
ಯೆಸ್ ಬ್ಯಾಂಕ್ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಣಾ ಕಪೂರ್ ಈಗ ಜೈಲಿನಲ್ಲಿದ್ದಾರೆ. ತಾನು ಕೈಗೊಂಡ ನಿರ್ಧಾರ ಮತ್ತು ಕೆಲಸಗಳಿಂದಾಗಿ ಯೆಸ್ ಬ್ಯಾಂಕ್ ದಿವಾಳಿತನ ಎದುರಿಸಿತು. ಬ್ಯಾಂಕಿನ ಷೇರುಗಳು ಎಷ್ಟು ತೀವ್ರವಾಗಿ ಕುಸಿದವು ಎಂದರೆ ಅವು ಇಂದಿಗೂ ಚೇತರಿಸಿಕೊಂಡಿಲ್ಲ. ಅವರ ಅಧಿಕಾರಾವಧಿಯಲ್ಲಿ, ಯೆಸ್ ಬ್ಯಾಂಕ್ 30,000 ಕೋಟಿ ರೂಪಾಯಿ ಸಾಲವನ್ನು ನೀಡಿತು ಮತ್ತು 20,000 ಕೋಟಿ ರೂಪಾಯಿಗಳು ಕೆಟ್ಟ ಸಾಲಗಳಾಗಿ ಮಾರ್ಪಟ್ಟಿವೆ. ಅಂದರೆ ಭವಿಷ್ಯದಲ್ಲಿಯೂ ಆ ಸಾಲದ ಹಣ ವಸೂಲಿಯಾಗುವ ಸಾಧ್ಯತೆ ಕಡಿಮೆ.