ಉದ್ದೇಶಿತ ಸುಸ್ತಿದಾರ ವಿಜಯ್ ಮಲ್ಯಗೆ ತನ್ನನ್ನು ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್ ಕಡೆಯ ಅವಕಾಶ ನೀಡಿದೆ. ಬ್ಯಾಂಕುಗಳು ಈತನ ವಿರುದ್ಧ ದಾಖಲಿಸಿರುವ ಪ್ರಕರಣಗಳಲ್ಲಿ ಮಲ್ಯ ತಪ್ಪಿತಸ್ಥ ಎಂಬುದು ಸಾಬೀತಾಗಿದೆ.
ಮಲ್ಯ ತಪ್ಪಿತಸ್ಥ ಎಂದು ಸಾಬೀತಾಗಿದ್ದು, ಆತನಿಗೆ ಶಿಕ್ಷೆ ವಿಧಿಸಬೇಕಿದೆ ಎಂದು ನ್ಯಾಯಾಧೀಶರಾದ ಯು ಯು ಲಲಿತ್ ಮತ್ತು ಎಸ್ ರವೀಂದ್ರ ಭಟ್ ಇದ್ದ ಪೀಠವು ತಿಳಿಸಿದೆ. ಶಿಷ್ಟಾಚಾರದ ಪ್ರಕಾರ ಆಪಾದಿತನನ್ನೂ ಆಲಿಸಬೇಕು. ಆದರೆ ಆತ ಇದುವರೆಗೂ ನ್ಯಾಯಾಲಯಕ್ಕೆ ಬಂದು ಹಾಜರಾಗಿಲ್ಲ ಎಂದು ಪೀಠ ತಿಳಿಸಿದೆ.
ಮಲ್ಯನನ್ನು ಗಡೀಪಾರು ಮಾಡಲು ಭಾರತ ಸರ್ಕಾರಕ್ಕಿಂತಲೂ ಬ್ರಿಟನ್ ಸರ್ಕಾರದ ಪಾತ್ರವಿದ್ದು, ಅದುವೇ ಆತನ ಗಡೀಪಾರು ತಡವಾಗುತ್ತಿರಲು ಕಾರಣ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದೇ ವೇಳೆ ಕೋರ್ಟ್‌ಗೆ ತಿಳಿಸಿದ್ದಾರೆ.
ಮಲ್ಯನ ವಿರುದ್ಧ ನ್ಯಾಯಾಂಗ ಪ್ರಕರಣವೊಂದಿದ್ದು, ಅದು ಇತ್ಯರ್ಥವಾಗುವವರೆಗೂ ಆತನನ್ನು ಬ್ರಿಟನ್‌ನಿಂದ ಗಡೀಪಾರು ಮಾಡಲು ಬಾರದು ಎಂದು ಅಕ್ಟೋಬರ್ 6, 2020ರಂದು ಭಾರತದ ಗೃಹ ಇಲಾಖೆಗೆ ಬ್ರಿಟನ್‌ನ ತತ್ಸಮಾನದ ಇಲಾಖೆ ತಿಳಿಸಿತ್ತು.
ತಲೆ ತಪ್ಪಿಸಿಕೊಂಡಿರುವ ಉದ್ಯಮಿಯ ಗಡೀಪಾರಿನ ವಿಚಾರ ಎಲ್ಲಿಗೆ ಬಂತು ಎಂದು ವರದಿ ಸಲ್ಲಿಸಲು ಆರು ವಾರಗಳ ಗಡುವು ನೀಡಿ ನವೆಂಬರ್ 2ರಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿತ್ತು. 2017ರಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದ ಆರೋಪದ ಮೇಲೆ ಆಲಿಕೆ ನಡೆಸುವುದಾಗಿ ನ್ಯಾಯಾಲಯ ಆ ವೇಳೆ ತಿಳಿಸಿತ್ತು.
ಜುಲೈ 14, 2017ರಲ್ಲಿ ಹೊರಡಿಸಿದ ಆದೇಶದಲ್ಲಿ, ಪುನರಾವರ್ತಿತ ನಿದೇರ್ಶನಗಳ ನಡುವೆಯೂ ಅನೇಕ ಬ್ಯಾಂಕುಗಳಿಂದ ಪಡೆದಿದ್ದ 9,000 ಕೋಟಿ ರೂ.ಗಳಷ್ಟು ಸಾಲವನ್ನು ಮಲ್ಯ ಹಿಂದಿರುಗಿಸದೇ ಇದ್ದ ಕಾರಣ ಆತನನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿತ್ತು. ಇದೇ ವೇಳೆ, ಸಾಲ ವಸೂಲಾತಿ ಪ್ರಕ್ರಿಯೆಗಳಿಗೆ ಅಡ್ಡಿಯಾಗಲು ಮಲ್ಯ ತನ್ನ ಆಸ್ತಿ ವಿವರಗಳನ್ನು ಬಹಿರಂಗಪಡಿಸದೇ, ಅವುಗಳನ್ನು ರಹಸ್ಯವಾಗಿ ಮಾರಾಟ ಮಾಡಲು ಮುಂದಾಗಿದ್ದ ಆರೋಪವೂ ಇತ್ತು.
ಈ ಪ್ರಕರಣದ ಮುಂದಿನ ಆಲಿಕೆಯನ್ನು ಫೆಬ್ರವರಿ ಕೊನೆಯ ವಾರಕ್ಕೆ ನಿಗದಿ ಪಡಿಸಲಾಗಿದೆ.