ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಕಾರ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ ಅನ್ನು ನಾನೇ ಚಾಲನೆ ಮಾಡುತ್ತಿದ್ದೆ ಎಂದು ವಿಜಯ ಕುಲಕರ್ಣಿ ಹೇಳಿದ್ದಾರೆ.
ಧಾರವಾಡ ಸಂಚಾರ ಠಾಣೆ ಬಳಿ ಮಾತನಾಡಿದ ವಿಜಯ ಕುಲಕರ್ಣಿ, ಬೈಕ್ ಅಡ್ಡ ಬಂದಾಗ ತಪ್ಪಿಸಲು ಹೋಗಿ ಅಪಘಾತವಾಗಿದ್ದು, ಅಪಘಾತದ ನಂತರ ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ ಬಳಿಕ ಸ್ಥಳದಿಂದ ತೆರಳಿದ್ದೆ. ನಾನು ಮದ್ಯ ಸೇವಿಸಿ ಕಾರು ಚಲಾಯಿಸಿರಲಿಲ್ಲ. ಈ ರೀತಿಯಾಗಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. ಈಗಾಗಲೆ ನನಗೆ ಟೆಸ್ಟ್ ಕೂಡ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹರಿದಿದ್ದು, ಇಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಧಾರವಾಡ ನಗರದ ಕೆವಿಜಿ ಬ್ಯಾಂಕ್ ಎದುರು ಅಪಘಾತ ಸಂಭವಿಸಿತ್ತು. ದಾರವಾಡ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯ ಕುಲಕರ್ಣಿ ಎ1 ಆರೋಪಿ ಎಂದು ಕೇಸ್ ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.