ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಪಿಯ ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದೆ.
ಎಲೈಟ್ ಗ್ರೂಪ್ ಬಿನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕವು ಪುದುಚೆರಿ ವಿರುದ್ಧ ಮೊದಲ ಪಂದ್ಯ ಎದುರಿಸಿತ್ತು. ಪುದುಚೆರಿ ತಂಡವು ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತ್ತು. ಹೀಗಾಗಿ ಕರ್ನಾಟಕ ಮೊದಲು ಬ್ಯಾಟಿಂಗ್ ಗೆ ಇಳಿದಿತ್ತು.
ಆರಂಭದಲ್ಲಿ ಕರ್ನಾಟಕಕ್ಕೆ ತೀವ್ರ ಒತ್ತಡ ಸೃಷ್ಟಿಯಾಗಿತ್ತು. ಕರ್ನಾಟಕದ ರೋಹನ್ ಕದಮ್ ಮೊದಲ ಓವರ್ ನಲ್ಲಿಯೇ ಯಾವುದೇ ರನ್ ಗಳಿಸದೆ ಔಟ್ ಆಗಿದ್ದರು. ಆದರೆ, ನಂತರ ಕರ್ನಾಟಕದ ಪಾಲಿಗೆ ಆರಂಭಿಕ ಆಟಗಾರ ರವಿ ಕುಮಾರ್ ಸಮರ್ಥ್ ಹಾಗೂ ಸಿದ್ದಾರ್ಥ್ ಆಸರೆಯಾದರು. ಈ ಜೋಡಿ ಎರಡನೇ ವಿಕೆಟ್ ಗೆ ಬರೋಬ್ಬರಿ 153 ರನ್ ಗಳ ಕಾಣಿಕೆ ನೀಡಿತು.
ನಂತರ ಬಂದ ಮನೀಷ್ ಪಾಂಡೆ, ಶರತ್ ಕೂಡ ಭರ್ಜರಿಯಾಗಿ ಆಟವಾಡಿದರು. ಅಂತಿಮವಾಗಿ ಕರ್ನಾಟಕ ತಂಡವು ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಒಪ್ಪಿಸಿ 289 ರನ್ ಗಳಿಸಿತು.
ಈ ಗುರಿ ಬೆನ್ನಟ್ಟಿದ ಪುದುಚೆರಿ ಕೇವಲ 53 ರನ್ ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು. ಆರಂಭದಿಂದಲೂ ಪುದುಚೆರಿ ತಂಡದ ಆಟಗಾರರು ಫೆವಲೀಯನ್ ಪರೇಡ್ ನಡೆಸಿದರು. ಕರ್ನಾಟಕದ ಬೌಲರ್ ಸುಚಿತ್ ಕೇವಲ 3 ರನ್ ನೀಡಿ 4 ವಿಕೆಟ್ ಗಳಿಸಿದರೆ, ವಿ ಕೌಶಿಕ್ 3 ವಿಕೆಟ್ ಪೆಡದರು.