ನವದೆಹಲಿ: ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಕಾಗೆ, ಕೋಳಿ ಹಾಗೂ ವಲಸೆ ಪಕ್ಷಿಗಳು ಸಾವನ್ನಪ್ಪಿವೆ.
ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಪೌಲ್ಟ್ರಿ ಕೋಳಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 2 ಲಕ್ಷ ಕೋಳಿ ಮತ್ತು ವಲಸೆ ಹಕ್ಕಿಗಳು ಸಾವನ್ನಪ್ಪಿದ ನಂತರ ಅಧಿಕಾರಿಗಳು ತೀವ್ರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಭೋಪಾಲ್ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ರಾಜಸ್ತಾನದ ಜಾಲ್ವಾರ್ ಜಿಲ್ಲೆಯಿಂದ ಬಂದಿದ್ದ ಕಾಗೆಗಳ ಮೃತದೇಹದಲ್ಲಿ ಹಕ್ಕಿಜ್ವರವಿರುವುದನ್ನು ದೃಢಪಡಿಸಿದೆ. ಜಲಂಧರ್ ಮೂಲದ ಪ್ರಾದೇಶಿಕ ರೋಗನಿರ್ಣಯ ಪ್ರಯೋಗಾಲಯ ಬಾರ್ವಾಲಾ ಪ್ರದೇಶದಲ್ಲಿ ಮೃತ ಪಕ್ಷಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ಕೈಗೊಂಡಿದೆ.
ಹರಿಯಾಣದಲ್ಲಿ ಕಳೆದ ಒಂದು ತಿಂಗಳಲ್ಲಿ 4 ಲಕ್ಷ ಕೋಳಿ ಸಾವನ್ನಪ್ಪಿವೆ. ರಾಜಸ್ಥಾನದಲ್ಲಿ ಎಲ್ಲ ರಾಷ್ಟ್ರೀಯ ಉದ್ಯಾನ ಮತ್ತು ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಡಿಸೆಂಬರ್ 31 ರಂದು ಮೊದಲ ಪ್ರಕರಣ ದೃಢಪಟ್ಟ ನಂತರ ಅರ್ಧ ಡಜನ್ ಜಿಲ್ಲೆಗಳಲ್ಲಿ ಪಕ್ಷಿಗಳ ಸಾವು ವರದಿಯಾಗಿದೆ. ಕೋಟಾ ಮತ್ತು ಜೋಧ್ ಪುರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಕ್ಕಿಗಳು ಮೃತಪಟ್ಟಿವೆ.
ರಾಜಸ್ತಾನ ಮುಖ್ಯ ವನ್ಯಜೀವಿ ವಾರ್ಡನ್ ಎಂ.ಎಲ್. ಮೀನಾ ಅವರು, ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು, ಕಾಡುಗಳು ಮತ್ತು ಗದ್ದೆ ಪ್ರದೇಶಗಳ ವಲಸೆ ಹಕ್ಕಿಗಳ ಬಗ್ಗೆ ನಿಗಾ ವಹಿಸಲಾಗಿದೆ. ಕೋಳಿ ಉದ್ಯಮದ ಮೇಲೆ ನಿರಂತರ ಮೇಲ್ವಿಚಾರಣೆ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಹರಿಯಾಣ, ಹಿಮಾಚಲಪ್ರದೇಶ ಭಾಗದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಹಿಮಾಚಲಪ್ರದೇಶದ ಡೆಹ್ರಾ, ಜವಾಲಿ, ಫತೇಪುರ್ ಮೊದಲಾದ ಕಡೆ ಕೋಳಿ ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ.