ಬೆಂಗಳೂರು: ಕೊರೋನಾ ಕಾರಣದಿಂದ ಈ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿಲ್ಲ. ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ವಿದ್ಯಾಗಮ ಯೋಜನೆಯನ್ನು ಪುನರಾರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಇದು ಶಾಲೆ ಆರಂಭದ ಮೊದಲ ಹೆಜ್ಜೆ ಎಂದು ಹೇಳಲಾಗುತ್ತಿದೆ. ಆದರೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಇದು ಶಾಲೆ ಶುರುವಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಯೋಜನೆ ಆರಂಭವಾಗಲಿದೆ. ಪ್ರಸ್ತುತ ಇರುವ ಆನ್ಲೈನ್, ಚಂದನ ವಾಹಿನಿಯ ಪಾಠಗಳು ಮುಂದುವರೆಯಲಿದೆ. ಅರ್ಧ ದಿನ ಮಕ್ಕಳು ಮಾಸ್ಕ್ ಧರಿಸಿ ಬಂದು ಸಾಮಾಜಿಕ ಅಂತರದೊಂದಿಗೆ ಕುಳಿತುಕೊಂಡು ಪಾಠ ಕಲಿಯಬಹುದಾಗಿದೆ. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿರುತ್ತದೆ.
ಪ್ರತಿ ಶಾಲೆಯಲ್ಲಿ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ ಮಾಡಲಾಗುವುದು. ರೋಗ ಲಕ್ಷಣಗಳು ಇರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಬೆಳಿಗ್ಗೆ 45 ನಿಮಿಷದ ಮೂರು ತರಗತಿಗಳು ಮತ್ತು ಮಧ್ಯಾಹ್ನ 3 ತರಗತಿಗಳು ನಡೆಯಲಿವೆ.
ಆಗಸ್ಟ್ 8 ರಿಂದ ಆರಂಭಿಸಲಾಗಿದ್ದ ವಿದ್ಯಾಗಮ ಯೋಜನೆಯನ್ನು ಅಕ್ಟೋಬರ್ 10 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಷ್ಕೃತ ವಿದ್ಯಾಗಮ ಯೋಜನೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ. ಸುರಕ್ಷತಾ ಕ್ರಮಗಳೊಂದಿಗೆ ಹೊಸರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.