ಬೆಂಗಳೂರು: ಸಂಕ್ರಾಂತಿ ಹಬ್ಬದ ನಂತರ ವಿದ್ಯಾಗಮ ಯೋಜನೆ ಮತ್ತೆ ಆರಂಭಿಸಲಾಗುವುದು. ಹೊಸ ರೂಪದಲ್ಲಿ ಯೋಜನೆ ಜಾರಿಯಾಗಲಿದ್ದು, ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುವುದು ಎಂದು ಹೇಳಲಾಗಿದೆ.
ಸುರಕ್ಷಿತ ಕ್ರಮ ಅನುಸರಿಸುವ ಜೊತೆಗೆ ಲೋಪ ನಿವಾರಿಸಿ ಯೋಜನೆ ಆರಂಭಿಸಲು ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿ ಕೊರೋನಾ ಸುರಕ್ಷಿತ ಕ್ರಮ ಅನುಸರಿಸುವುದು, ಪಾಳಿ ಪದ್ಧತಿ ಅಥವಾ ದಿನಕ್ಕೊಂದು ತರಗತಿಯಂತೆ ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಶಾಲೆ ಆವರಣದಲ್ಲಿ ಪಾಠ ಮಾಡಲಾಗುತ್ತದೆ. ಹಂತ ಹಂತವಾಗಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.
ಕೊರೋನಾ ಕಾರಣದಿಂದ ವಿದ್ಯಾಗಮ ಯೋಜನೆ ನಿಲ್ಲಿಸಲಾಗಿದ್ದು, ದೂರದರ್ಶನದ ಮೂಲಕ ಸಂವೇದಾ ತರಗತಿ ನಡೆಯುತ್ತಿವೆ. ಆನ್ಲೈನ್ ತರಗತಿ ಸರ್ಕಾರಿ ಶಾಲೆ ಮಕ್ಕಳಿಗೆ ತಲುಪುತ್ತಿಲ್ಲ. ಗ್ರಾಮೀಣ ಭಾಗದ ಮಕ್ಕಳಿಗಂತೂ ತೊಂದರೆ ಹೆಚ್ಚಿದೆ. ಇವೇ ಮೊದಲಾದ ಕಾರಣಗಳಿಂದ ಹಿಂದಿನ ಲೋಪ ನಿವಾರಿಸಿ ಶಾಲೆ ಆವರಣದಲ್ಲಿಯೇ ವಿದ್ಯಾಗಮ ಯೋಜನೆಯಡಿ ಮಕ್ಕಳು, ಶಿಕ್ಷಕರು ಮುಖಾಮುಖಿಯಾಗಲು ಯೋಜಿಸಲಾಗಿದ್ದು, ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ.