ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯ ಮೊರೆಹೋಗಿದೆ.
ರಾಜ್ಯದಲ್ಲಿ ಶಾಲೆಗಳಿಗೆ ರಜೆ ನೀಡಿದರೆ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಯೋಜನೆಯ ಜಾರಿಗೆ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಗಳಲ್ಲಿಯೂ ಕೊರೋನಾ ಸೋಂಕು ಹೆಚ್ಚಾಗಿ ರಜೆ ಘೋಷಣೆ ಮಾಡಿದರೆ ವಿದ್ಯಾಗಮ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಈ ಕುರಿತಾಗಿ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದ್ದು, ಎಲ್ಲ ಜಿಲ್ಲಾ ಬಿಇಒ ಮತ್ತು ನಿರ್ದೇಶಕರಿಗೆ ಈ ಕುರಿತು ಸೂಚನೆ ನೀಡಲಾಗಿದೆ. ವಿದ್ಯಾಗಮ ವೇಳಾಪಟ್ಟಿ ಮತ್ತು ಮಾರ್ಗಸೂಚಿಗಳೊಂದಿಗೆ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ವಿದ್ಯಾಗಮ ಮಾದರಿಯಲ್ಲಿ ಬೋಧನೆ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.
ಹಿಂದೆ ಕೊರೋನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ವಿದ್ಯಾಗಮ ಯೋಜನೆ, ಆನ್ ಲೈನ್ ಕ್ಲಾಸ್ ಮೊದಲಾದ ಕ್ರಮದ ಮೂಲಕ ಪಾಠ ಮಾಡಲಾಗಿತ್ತು.