ಬೆಂಗಳೂರು: ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಿರುವ ನಡುವೆಯೇ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಗೊಮ್ಮಟದಲ್ಲಿ ಬಿರುಕು ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಂದು ವಿಧಾನಸೌಧಕ್ಕೆ ದಿಢೀರ್ ಭೇಟಿ ನೀಡಿದ ಸ್ಪೀಕರ್ ಯು.ಟಿ.ಖಾದರ್, ವಿಧಾನಸೌಧದ ಗೊಮ್ಮಟದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸ್ಪೀಕರ್ ಖಾದರ್, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೂ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಇಲಾಖೆ ಗಮನಕ್ಕೆ ತಂದು ಸರಿಪಡಿಸುತ್ತೇನೆ ಎಂದು ಹೇಳಿದರು.
ವಿಧಾನಸೌಧ ಬಹಳ ಹಳೆಯ ಕಟ್ಟಡವಾಗಿದ್ದರಿಂದ ಗೊಮ್ಮಟದಲ್ಲಿ ಬಿರುಕು ಬಿಟ್ಟಿರುವ ಸಾಧ್ಯತೆ ಇದೆ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.