ಬೆಂಗಳೂರು: ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮದ ಹಗರಣ ಪ್ರತಿಧ್ವನಿಸಿದ್ದು, ವಿಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಸದನದಲ್ಲಿ ಗದ್ದಲವೇರ್ಪಟ್ಟಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಗಂಗಾಕಲ್ಯಾಣ ಯೋಜನೆಗೆ ಎಸ್ ಆರ್ ರೇಟ್ ಫಿಕ್ಸ್ ಮಾಡಿರುವುದು ದೊಡ್ಡ ದಂಧೆಯಾಗಿದೆ ಎಂದರು. ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಈಶ್ವರ ಖಂಡ್ರೆ, ನಿಮ್ಮ ಅವಧಿಯಲ್ಲಿ 441 ಕೋಟಿ ಅವ್ಯವಹಾರವಾಗಿದೆ. ಆಗ ಯಾಕೆ ಇಡಿ ಬರಲಿಲ್ಲ ಎಂದು ಪ್ರಶ್ನಿಸಿದರು. ಖಂಡ್ರೆ ಹೇಳಿಕೆಗೆ ಶಾಸಕ ಯತ್ನಾಳ್ ಎದ್ದು ನಿಂತು ಹರಿಹಾಯ್ದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಗರಂ ಆದರು.
ಮೊದಲು ಸಚಿವ ಈಶ್ವರ್ ಖಂಡ್ರೆಗೆ ನೀವು ಇಂದು ಸದನಕ್ಕೆ ಬಂದಿದ್ದೀರಿ. ಎರಡು ದಿನದಿಂದ ಇಲ್ಲಿ ಏನಾಗಿದೆ ಎಂದು ನಿಮಗೆ ಗೊತ್ತಿಲ್ಲ. ವಿಪಕ್ಷದವರಿಗೆ ಮಾತನಾಡುವ ಹಕ್ಕಿದೆ. ನೀವು ಕುಳಿತುಕೊಳ್ಳಿ ಎಂದು ಸೂಚಿಸಿದರು. ಈ ವೇಳೆ ಶಾಸಕ ಯತ್ನಾಳ್ ಮತ್ತೆ ಎದ್ದು ನಿಂತು ಮಧ್ಯಪ್ರವೇಶ ಮಾಡಲು ಮುಂದಾದರು. ಯತ್ನಾಳ್ ಗೆ ನೀವೂ ಕುಳಿತುಕೊಳ್ಳಿ ಎಂದು ಸೂಚಿಸಿದರು. ಆದರೂ ಯತ್ನಾಳ್ ಪದೇ ಪದೇ ಏಳುತ್ತ ಮಧ್ಯೆ ಮಾತನಾಡಲು ಯತ್ನಿಸುತ್ತಿದ್ದಂತೆ ಕೋಪಗೊಂಡ ಸ್ಪೀಕರ್ ಖಾದರ್, ನೀವು ಯಾಕೆ ಪದೇ ಪದೇ ಎದ್ದುನಿಲ್ಲುತ್ತೀರಿ? ನಿಮ್ಮ ಸೀಟು ಸರಿ ಇಲ್ವಾ? ಸೀಟು ಸರಿಯಿಲ್ಲವೋ, ನೀವು ಸರಿಯಿಲ್ಲವೋ ಗೊತ್ತಾಗುತ್ತಿಲ್ಲ. ನಿಮ್ಮ ಸೀಟು ಸರಿಯಿಲ್ಲವೆಂದರೆ ಸೀಟು ಚೇಂಜ್ ಮಾಡಿಸುತ್ತೇನೆ ಎಂದು ಗುಡುಗಿದರು.