
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಆಡಳಿತಾರೂಢ ಕಾಂಗ್ರೆಸ್ ನಾಯಕರನ್ನು ಕುಟುಕಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ಸರ್ಕಾರದ ಸಚಿವರಲ್ಲಿಯೇ ಸಿಎಂ ಕುರ್ಚಿಗಾಗಿ ಕಾದಾಟ ಆರಂಭವಾಗಿದೆ. ಗೃಹ ಸಚಿವ ಪರಮೇಶ್ವರ್ ಅವರು ದೆಹಲಿಗೆ ಹೋಗಿ ಬರ್ತಾರೆ, ನಾನು ಸಿಎಂ ಆಗುತ್ತೇನೆ ಎನ್ನುತ್ತಾರೆ. ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಅಂತಾರೆ. ಒಟ್ಟಾರೆ ಸರ್ಕಾರದಲ್ಲಿ ಸಿಎಂ ಬದಲಾವಣೆಯದ್ದೇ ಚರ್ಚೆ ನಡೆಯುತ್ತಿದೆ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ಬಜೆಟ್ ಮಂಡನೆ ನಂತರ ‘ರಾಜ್ಯದ ಕರಿಮಣಿ ಮಾಲೀಕ’ ಯಾರು? ಎಂಬ ಪ್ರಶ್ನೆ ನಮಗೂ ಮೂಡುತ್ತಿದೆ. ಜನರಲ್ಲಿಯೂ ಅಸ್ಥಿರತೆ ಕಾಡುತ್ತಿದೆ. ಮೊದಲು ಆ ಅಸ್ಥಿರತೆಯನ್ನು ಹೋಗಲಾಡಿಸಿ ಎಂದು ಆಗ್ರಹಿಸಿದರು.
ನಮ್ಮ ಪಕ್ಷದಲ್ಲಿಯೂ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ನಡೆಯುತ್ತಿದೆ. ರಾಜ್ಯಾಧ್ಯಕ್ಷರು ಯಾರಾಗುತ್ತಾರೆ ಎಂಬ ಪ್ರಶ್ನೆಯೂ ಇದೆ. ಆದರೆ ನಮ್ಮಲ್ಲಿ ಗೊಂದಲ ಇಲ್ಲ. ನಾವು ರಾಜ್ಯದ ಜನರನ್ನು ಪ್ರತಿನಿಧಿಸಲ್ಲ. ವಿಪಕ್ಷ ಸ್ಥಾನದಲ್ಲಿದ್ದೇವೆ. ಆದರೆ ಮುಖ್ಯಮಂತ್ರಿಗಳು ರಾಜ್ಯದ ಜನರನ್ನು ಪ್ರತಿನಿಧಿಸುತ್ತಾರೆ. ಆದರೆ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆಯೇ ಆಡಳಿತ ಪಕ್ಷದಲ್ಲಿ ಚರ್ಚೆ ನಡೆದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುವುದಿಲ್ಲವೇ? ಕಾಂಗ್ರೆಸ್ ನಲ್ಲಿ ಗೊಂದಲ ಇದೆ. ಹಾಗಾಗಿ ಮೊದಲು ಈ ಗೊಂದಲಕ್ಕೆ ತೆರೆ ಎಳೆಯಲಿ. ಸಿಎಂ ಈ ಬಗ್ಗೆ ಸ್ಪಷ್ಟ ಉತ್ತರ ಕೊಡಲಿ ಎಂದು ಹೇಳಿದರು.