ಬೆಳಗಾವಿ: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ವಿಧಾನಸಭೆಯಲ್ಲಿ ಪ್ರತಿದ್ವನಿಸಿದೆ. ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ. ಬಾಣಂತಿಯರು ಸಾವನ್ನಪ್ಪುತ್ತಿದ್ದರೂ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಗಂಭೀರತೆ ಇಲ್ಲದಾಗಿದೆ ಎಂದು ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಆರ್.ಅಶೋಕ್, ಬಳ್ಳಾರಿ, ಬೆಳಗಾವಿ, ರಾಯಚೂರು ಸೇರಿದಂತೆ ವಿವಿಧೆಡೆ ಬಾಣಂತಿಯರ ಸರಣಿ ಸಾವು ಸಂಭವಿಸಿದೆ. ಬೆಳಗಾವಿಯಲ್ಲಿ ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ. ಸಾವಿನ ಬಗ್ಗೆ ಕೇಳಿದರೆ ಮೆಡಿಸಿನ್ ಪ್ರಾಬಂ ಎನ್ನುತ್ತಿದ್ದಾರೆ. ಆರೋಗ್ಯ ಇಲಾಖೆಗೆ ಅನಾರೋಗ್ಯವಾಗಿದೆ. ರಾಜ್ಯದಲ್ಲಿ ಜನರು ಸಾಯುತ್ತಿದ್ದರೂ ಸರ್ಕಾರಕ್ಕೆ ಯಾವುದೇ ಚಿಂತೆಯಿಲ್ಲ. ರಾಜ್ಯದ ಜನರ ಬದುಕಿಗೆ ಗ್ಯಾರಂಟಿ ಇಲ್ಲದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಾಣಂತಿಯರ ಸರನಿ ಸಾವು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಇದೇ ವೇಳೆ ಆರ್.ಅಶೋಕ್ ಆಗ್ರಹಿಸಿದರು.
600-700 ನಕಲಿ ವೈದ್ಯರಿದ್ದಾರೆ. ನಕಲಿ ವೈದ್ಯರ ಹಾವಳಿಯನ್ನು ತಡೆಯಲು ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ವಯನಾಡಿನಲ್ಲಿ ಆನೆ ತುಳಿತಕ್ಕೊಳಗಾದವರಿಗೆ 15 ಲಕ್ಷ ಪರಿಹಾರ ಕೊಟ್ಟರು. ಇಲ್ಲಿ ಮೃತಪಟ್ಟವರಿಗೆ ಕೇವಲ 2 ಲಕ್ಷ ಪರಿಹಾರ ನೀಡಿದ್ದಾರೆ. ರಾಜ್ಯದ ಜನರ ಜೀವಕ್ಕೆ ಬೆಲೆಯಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.