ಬೆಳಗಾವಿ: ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮದ ವಿಚಾರ ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದ್ದು, ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲಕ್ಕೆ ಕಾರಣವಾಯಿತು.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಎ.ನಾರಾಯಣಸ್ವಾಮಿ ಕೋಲಾರದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ವಿಚಾರ ಪ್ರಸ್ತಾಪಿಸಿದರು. ಕೋಲಾರದಲ್ಲಿ ಅಕ್ರಮ ಗಣಿಗಾರಿಕೆ, ಎಂ ಸ್ಯಾಂಡ್ ಉತ್ಪಾದನೆ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಂಡ ಬಗ್ಗೆ ಸರ್ಕಾರ ಸೂಕ್ತ ಉತ್ತರ ನೀಡಿಲ್ಲ. 40 ಕ್ರಶರ್ ಕೆಲಸ ಮಾಡುತ್ತಿದೆ ಎಂದು ಸರ್ಕಾರ ಹೇಳಿದೆ. ಇದರಲ್ಲಿ ಅಧಿಕೃತ ಎಷ್ಟು, ಅನಧಿಕೃತ ಎಷ್ಟು ಎಂದು ಹೇಳಿಲ್ಲ. ಅಕ್ರಮ ಗಣಿಗಾರಿಕೆಗೆ ದಂಡ ಹಾಕಿ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಗಣಿ ಸಚಿವರ ಪರವಾಗಿ ಸಚಿವ ಚಲುವರಾಯಸ್ವಾಮಿ ಉತ್ತರಿಸಿದ್ದು, ಅಕ್ರಮ ಗಣಿಗಾರಿಕೆಗೆ ದಂಡ ಹಾಕಿದ್ದೀರಾ? ಎಂಬ ಪ್ರಶ್ನೆಯಲ್ಲಿ ವೈಯಕ್ತಿಕ ಹಿತಾಸಕ್ತಿ ಇದೆ ಎಂದರು. ಸಚಿವರ ಹೇಳಿಕೆಗೆ ಎ.ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ವೈಯಕ್ತಿಕ ಹಿತಾಸಕ್ತಿ ಎಂಬ ಸಚಿವರ ಆರೋಪಕ್ಕೆ ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟಿಸಿದರು. ಗದ್ದಲ ಹೆಚ್ಚುತ್ತಿದ್ದಂತೆ ಸಭಾಪತಿ ಬಸವರಾಜ್ ಹೊರಟ್ಟಿ ವೈಯಕ್ತಿಕ ಹಿತಾಸಕ್ತಿ ಪದವನ್ನು ಕಡತದಿಂದ ತೆಗೆಯಲು ಸೂಚಿಸಿದರು.
ಈ ವೇಳೆ ಮಾತು ಮುಂದುವರೆಸಿದ ಸಚಿವ ಚಲುವರಾಯಸ್ವಾಮಿ, ನಿಖರವಾಗಿ ಇಂತಹದ್ದರ ಬಗ್ಗೆ ಉತ್ತರ ಬೇಕು ಎಂದರೆ ಕೊಡುತ್ತೇವೆ ಎಂದರು. ಸಚಿವರ ಉಡಾಫೆ ಮಾತಿಗೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಪ್ರಶ್ನೆ ಕೇಳುವ ಹಕ್ಕು ನಮಗಿದೆ. ಸಚಿವರ ಹೇಳಿಕೆ ಪ್ರಶ್ನಿಸುವ ನಮ್ಮ ಹಕ್ಕಿಗೆ ಚ್ಯುತಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಜೆಡಿಎಸ್ ಸದಸ್ಯರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಸದನದಲ್ಲಿ ಗದ್ದಲ ಹೆಚ್ಚುತ್ತಿದ್ದಂತೆ ಅಂತಿಮವಾಗಿ ಸಭಾಪತಿ ಬಸವರಾಜ್ ಹೊರಟ್ಟಿ ಈ ಪ್ರಶ್ನೆಯನ್ನೇ ತಡೆಹಿಡಿಯುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.