ಬಿಹಾರದ ಶಿಕ್ಷಣ ವ್ಯವಸ್ಥೆ ಕುರಿತು ಈ ಹಿಂದೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಸಾಮೂಹಿಕ ನಕಲು, ಪರೀಕ್ಷಾ ಅಕ್ರಮ ಮೊದಲಾದ ಸಂಗತಿಗಳು ಅಲ್ಲಿ ಸಾಮಾನ್ಯವಾಗಿದ್ದು, ಆದರೆ ಇತ್ತೀಚೆಗೆ ಅದಕ್ಕೆಲ್ಲ ಕಡಿವಾಣ ಬಿದ್ದಿದೆ ಎಂದು ಭಾವಿಸಲಾಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅಲ್ಲಿನ ಶಿಕ್ಷಣ ವ್ಯವಸ್ಥೆಯ ಕುರಿತು ಅನುಮಾನಗಳು ಮೂಡುವಂತೆ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಪರಿಶೀಲಿಸುತ್ತಿರುವ ಶಿಕ್ಷಕಿ ಅದನ್ನು ಸರಿಯಾಗಿ ನೋಡದೆ ಅಂಕ ನೀಡುತ್ತಾ ಹೋಗಿದ್ದಾರೆ. ವಿದ್ಯಾರ್ಥಿಗಳು ಏನು ಉತ್ತರ ಬರೆದಿದ್ದಾರೆ ಎಂಬುದನ್ನು ಸರಿಯಾಗಿ ನೋಡುವ ಗೋಜಿಗೂ ಸಹ ಆ ಶಿಕ್ಷಕಿ ಹೋಗಿಲ್ಲ. ಅದ್ಯಾವ ಆಧಾರದಲ್ಲಿ ಈ ಶಿಕ್ಷಕಿ ಅಂಕ ನೀಡಿದ್ದಾರೋ ಎಂಬುದು ಅರ್ಥವಾಗುತ್ತಿಲ್ಲ.
ಇದೇ ಶಿಕ್ಷಕಿಯ ಮತ್ತೊಂದು ವಿಡಿಯೋ ಸಹ ವೈರಲ್ ಆಗಿದ್ದು, ಉತ್ತರ ಪರೀಕ್ಷೆಗಳನ್ನು ಮೌಲ್ಯಮಾಪನ ಮಾಡುವ ಕೊಠಡಿಯಲ್ಲಿ ಇತರೆ ಶಿಕ್ಷಕ / ಶಿಕ್ಷಕಿಯರ ಜೊತೆ ಈಕೆ ಕುಳಿತಿದ್ದಾರೆ. ಈ ಸಂದರ್ಭದಲ್ಲೂ ಸಹ ಆಕೆ ವಿದ್ಯಾರ್ಥಿಗಳ ಉತ್ತರವನ್ನು ಗಮನಿಸುವ ವ್ಯವಧಾನವೂ ಇಲ್ಲದಂತೆ ಎತ್ತಲೋ ನೋಡುತ್ತಾ ಅಂಕಗಳು ಕೊಟ್ಟಿದ್ದಾರೆ.
ಈ ವಿಡಿಯೋಗಳು ವೈರಲ್ ಆದ ಬಳಿಕ ವಿದ್ಯಾರ್ಥಿಯೊಬ್ಬನ ಪೋಷಕರು ಸಂಬಂಧಪಟ್ಟ ಶಿಕ್ಷಕಿಯ ವಿರುದ್ಧ ದೂರು ನೀಡಿದ್ದು ಈಗ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಭಾವಿ ಪ್ರಜೆಗಳನ್ನು ರೂಪಿಸಬೇಕಾದ ಈ ಶಿಕ್ಷಕಿ, ಪರೀಕ್ಷಾ ವಿಷಯದಲ್ಲಿ ಅದೆಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹಲವಾರು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಂತಹ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.