ಲಾಹೋರ್: ಲಾಹೋರ್ ನ ಅಚ್ರಾ ಮಾರ್ಕೆಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸ್ಥಳೀಯ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಮಹಿಳೆಯೊಬ್ಬರು ಧರ್ಮನಿಂದೆಯ ಆರೋಪ ಹೊತ್ತು ಜನಸಮೂಹದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಆಕೆಯ ಬಟ್ಟೆಯ ಮೇಲೆ ಕುರಾನ್ ವಚನಗಳನ್ನು ಬರೆದಿರುವುದನ್ನು ಗಮನಿಸಿದ ಜನ ಪ್ರಶ್ನಿಸಿದ್ದು ಕೋಲಾಹಲ ಉಂಟಾಯಿತು. ಕೂಡಲೇ ಪೊಲೀಸರು ಜಾಗೃತಗೊಂಡು ಘಟನಾ ಸ್ಥಳಕ್ಕೆ ಆಗಮಿಸಿದರು. ಆಕ್ರೋಶಗೊಂಡಿದ್ದ ಜನಸಮೂಹದಿಂದ ಉಂಟಾದ ಉದ್ವಿಗ್ನತೆಯ ನಡುವೆ ಅವರು ಧರ್ಮನಿಂದೆಯ ಆರೋಪ ಹೊತ್ತ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಜನಸಮೂಹವು ಮಹಿಳೆಯನ್ನು ಸುತ್ತುವರೆದಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಜನರ ನುಡುವೆಯೇ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ(ಎಎಸ್ಪಿ) ಶೆಹರ್ಬಾನೊ ಮತ್ತು ಅವರ ತಂಡವು ಮಧ್ಯಪ್ರವೇಶಿಸಿ ಮಹಿಳೆ ರಕ್ಷಣೆ ಮಾಡಿದೆ.
ಎಎಸ್‌ಪಿ ಶೆಹರ್ಬಾನೊ ಮತ್ತು ಅವರ ತಂಡ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಹಿಳೆಯ ಉಡುಪಿನಲ್ಲಿ ಯಾವುದೇ ಕುರಾನ್ ಪದ್ಯಗಳು ಅಥವಾ ಆಕ್ಷೇಪಾರ್ಹ ವಿಷಯಗಳು ಕಂಡುಬಂದಿಲ್ಲ.
ಅನುಕರಣೀಯ ಧೈರ್ಯ ಮತ್ತು ವೃತ್ತಿಪರತೆಯ ಪ್ರದರ್ಶನದಲ್ಲಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫ್ ಪೋಲೀಸ್(ಎಎಸ್ಪಿ) ಶೆಹರ್ಬಾನೊ ಮತ್ತು ಅವರ ತಂಡವು ಪ್ರಕ್ಷುಬ್ಧ ಗುಂಪಿನ ನಡುವೆ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ. ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿವೆ.