ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಯಲಾಗಿವೆ. ಬಂಗಾಳಿ ಮಾಧ್ಯಮಗಳು ವರದಿ ಮಾಡಿದಂತೆ, ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳ ಪುರಾವೆಗಳನ್ನು ಸಿಬಿಐ ಕಂಡುಹಿಡಿದಿದೆ. ಭ್ರಷ್ಟಾಚಾರ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಸಿಬಿಐ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬಯಲಾಗಿದ್ದು ಆಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹಗಳೊಂದಿಗೆ ಲೈಂಗಿಕ ಚಟುವಟಿಕೆಯ ವಿಡಿಯೋ ರೆಕಾರ್ಡಿಂಗ್ ಸೇರಿದಂತೆ ನೆಕ್ರೋಫಿಲಿಕ್ ಪೋರ್ನ್ ದಂಧೆಗಳನ್ನು ನಡೆಸುವ ವ್ಯವಹಾರ ಮಾಡಲಾಗಿತ್ತು ಎಂದು ವರದಿಯಾಗಿದೆ.
ಇದಲ್ಲದೆ 2021 ರಿಂದ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 60 ರಿಂದ 70 ದೇಹಗಳು ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಸಿಬಿಐ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.
ಪ್ರಾಸಂಗಿಕವಾಗಿ ಟ್ರೈನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯು ಆರ್‌ಜಿ ಕರ್ ಆಸ್ಪತ್ರೆಯಲ್ಲಿನ ಅವ್ಯವಹಾರಗಳನ್ನು ಹೊರಗೆಳೆದಿದೆ. ಅಪರಾಧ ಚಟುವಟಿಕೆ ಮತ್ತು ಅನುಮಾನಾಸ್ಪದ ಸಾವಿನ ಆರೋಪಗಳ ಮೇಲೆ ಆರ್‌ಜಿ ಕರ್ ಆಸ್ಪತ್ರೆ ಆಗಾಗ್ಗೆ ಸುದ್ದಿಯಲ್ಲಿತ್ತು. ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದು ಆಸ್ಪತ್ರೆಯ ಶವಾಗಾರದಲ್ಲಿ ರಾತ್ರೋ ರಾತ್ರಿ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.