ಇಂಡೋನೇಷ್ಯಾದಲ್ಲಿ ಸುಮೇರು ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೂದಿಯ ಆಳವಾದ ಪದರಗಳು ಪ್ರದೇಶವನ್ನು ಆವರಿಸಿದ್ದು, ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಜಾವಾ ದ್ವೀಪದ ಅತಿ ಎತ್ತರದ ಪರ್ವತದಲ್ಲಿರುವ ಸುಮೇರು ಜ್ವಾಲಾಮುಖಿ ಶನಿವಾರ ಸ್ಫೋಟಗೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಬೂದಿ ಮತ್ತು ಮೋಡಗಳಂತೆ ಕಂಡು ಬರುವ ದಟ್ಟವಾದ ಹೊಗೆಯನ್ನು ಉಗುಳಿದೆ. ಇದನ್ನು ನೋಡಿದ ಜನರು ಭಯಭೀತರಾಗಿ ಓಡಿಹೋಗಿದ್ದಾರೆ.
ಜ್ವಾಲಾಮುಖಿ ಸ್ಫೋಟಗೊಳ್ಳುವಾಗ ಗುಡುಗು ಸಹಿತ ಮಳೆ ಬಂದಿದೆ. ಇದರಿಂದ ದಟ್ಟವಾದ ಕೆಸರು ರೂಪುಗೊಂಡಿತು. ಇದರಿಂದ ಪ್ರೊನೊಜಿವೊ ಮತ್ತು ಕ್ಯಾಂಡಿಪುರೊದ ಎರಡು ಪ್ರಮುಖ ಹಳ್ಳಿಗಳನ್ನು ಸಂಪರ್ಕಿಸುವ ಕನಿಷ್ಠ ಒಂದು ಸೇತುವೆ ನಾಶವಾಯಿತು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಕೂಡ ಅಡ್ಡಿಯಾಯಿತು ಎಂದು ಲುಮಾಜಾಂಗ್ ಜಿಲ್ಲಾ ಮುಖ್ಯಸ್ಥ ಥೋರಿಕುಲ್ ಹಕ್ ತಿಳಿಸಿದ್ದಾರೆ.
ಇತ್ತೀಚೆಗೆ ಕಡಿಮೆಯಾಗ್ತಿರುವ 2000 ರೂ. ನೋಟುಗಳ ಬಗ್ಗೆ ಮುಖ್ಯ ಮಾಹಿತಿ
ಹತ್ತಿರದ ಜಿಲ್ಲೆ ಲುಮಾಜಾಂಗ್ ಅನ್ನು ಮಲಾಂಗ್ ನಗರದೊಂದಿಗೆ ಸಂಪರ್ಕಿಸುವ ಸೇತುವೆಯು ಸ್ಫೋಟದಿಂದ ನಾಶವಾಯಿತು ಮತ್ತು ಕಟ್ಟಡಗಳು ಧ್ವಂಸಗೊಂಡಿವೆ. ಸುಮೇರು ಜ್ವಾಲಾಮುಖಿ ಸ್ಫೋಟಗೊಂಡ ನಂತರ ಇದರ ವಿಡಿಯೋಗಳು ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
3,600 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿರುವ ಸುಮೇರು, ಇಂಡೋನೇಷ್ಯಾದಲ್ಲಿನ ಸುಮಾರು 130 ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ಈ ವರ್ಷದ ಜನವರಿಯಲ್ಲೂ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಆದರೆ ಆ ಸಮಯದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
2010 ರಲ್ಲಿ ಜಾವಾ ದ್ವೀಪದಲ್ಲಿ ಸಂಭವಿಸಿದ ಮೆರಾಪಿ ಜ್ವಾಲಾಮುಖಿಯ ಸ್ಫೋಟಕ್ಕೆ 350 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 4,00,000 ಜನರನ್ನು ಸ್ಥಳಾಂತರಿಸಲಾಗಿತ್ತು.