ಮಹಾರಾಷ್ಟ್ರದ ನಾಸಿಕ್ ನಲ್ಲಿ ಪ್ರಧಾನಿ ಮೋದಿ ಅವರ ಭಾಷಣದ ವೇಳೆ ಯುವಕರು ಈರುಳ್ಳಿ ಬೆಲೆ ಬಗ್ಗೆ ಮಾತನಾಡಿ ಎಂದು ಹೇಳಿದ ಘಟನೆ ನಡೆದಿದೆ.
ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿಂದೂ -ಮುಸ್ಲಿಂ ವಿಚಾರ, ಕಾಂಗ್ರೆಸ್ ನಿಂದ ಮುಸ್ಲಿಮರ ಓಲೈಕೆ ಮೊದಲಾದವುಗಳ ಬಗ್ಗೆ ಭಾಷಣ ಮಾಡಿದ್ದಕ್ಕೆ ನಾಸಿಕ್ ಸಭೆಯಲ್ಲಿ ಸಭಿಕರು ಆಕ್ಷೇಪಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದವರೊಬ್ಬರು ಈರುಳ್ಳಿ ಸಮಸ್ಯೆ ಬಗ್ಗೆ ಮಾತನಾಡಿ ಎಂದು ಪ್ರಧಾನಿ ಭಾಷಣದ ವೇಳೆ ಘೋಷಣೆ ಕೂಗಿದ್ದಾರೆ.
ಭಾಷಣದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಅನೇಕ ವಿರೋಧ ಪಕ್ಷದ ನಾಯಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪಿಂಪಲ್ ಗಾವ್ ಬಸವಂತ್ ನಲ್ಲಿ ಪ್ರಧಾನಿ ಮೋದಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ, ಧಾರ್ಮಿಕ ಆಧಾರದ ಮೇಲೆ ಬಜೆಟ್ ವಿಭಜಿಸುವುದು ಅಪಾಯಕಾರಿ ಕಲ್ಪನೆಯಾಗಿದೆ. ನಾವು ಎಲ್ಲರಿಗೂ ಕಲ್ಯಾಣ ಯೋಜನೆಗಳ ಪ್ರಯೋಜನ ನೀಡುತ್ತೇವೆ. ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಬಜೆಟ್ ಹಂಚಿಕೆ ಬಯಸುತ್ತದೆ. ಧರ್ಮದ ಆಧಾರದ ಮೇಲೆ ದೇಶ ವಿಭಜಿಸುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಅನೇಕರು ಮೊದಲು ಈರುಳ್ಳಿ ಸಮಸ್ಯೆ, ಬೆಲೆ ಏರಿಕೆ ಬಗ್ಗೆ ಮಾತನಾಡಿ. 10 ವರ್ಷದಲ್ಲಿ ನಿಮ್ಮ ಸಾಧನೆಗಳ ಬಗ್ಗೆ ಹೇಳಿ. ಯಾವಾಗಲೂ ಹಿಂದೂ, ಮುಸ್ಲಿಂ, ಕಾಂಗ್ರೆಸ್ ಬಗ್ಗೆಯೇ ಏಕೇ ಮಾತಾಡುತ್ತೀರಿ. ನಿಮ್ಮ ಸಾಧನೆಗಳ ಬಗ್ಗೆ ಮಾತಾಡಿ ಎಂದು ಘೋಷಣೆ ಕೂಗಿದ್ದಾರೆ.
ಇನ್ನು ಸಭೆಯ ಆರಂಭಕ್ಕೂ ಮೊದಲೇ ಕೊರಳಿಗೆ ಈರುಳ್ಳಿ ಹಾರ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘದ ಸದಸ್ಯರು ಸೇರಿದಂತೆ 12 ಮಂದಿಯನ್ನು ಲಾಸಲಗಾಂವ ಪೊಲೀಸರು ಬಂಧಿಸಿದ್ದರು.