ಬಲ್ಲಿಯಾ: ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮದುವೆ ಮೆರವಣಿಗೆಯಲ್ಲಿ ವರನ ಮೇಲೆ ಮಹಿಳೆಯೊಬ್ಬರು ಆಸಿಡ್ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ನಂತರ ಮಹಿಳೆಯನ್ನು ವರನ ಸಂಬಂಧಿಕರು ಹಿಡಿದು ಅಮಾನುಷವಾಗಿ ಥಳಿಸಿದ್ದಾರೆ.
ವರನ ಮೇಲೆ ಆಸಿಡ್ ದಾಳಿ ಮಾಡಿದ ಮಹಿಳೆಯನ್ನು ಥಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದ್ದು, ಘಟನೆಯನ್ನು ಚಿತ್ರೀಕರಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ವೈರಲ್ ಮಾಡಲಾಗಿದೆ.
ಮಂಗಳವಾರ ಬಲ್ಲಿಯಾದಲ್ಲಿರುವ ಬನ್ಸ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ದುಮಾರಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಈ ಘಟನೆ ಸಂಭವಿಸಿದೆ. ಹಲ್ಲೆಯಿಂದ ವರನಿಗೆ ಸುಟ್ಟ ಗಾಯಗಳಾಗಿವೆ. ರಾಕೇಶ್ ಬಿಂದ್ ಎಂದು ಗುರುತಿಸಲ್ಪಟ್ಟಿರುವ ವರನು ಗ್ರಾಮದಿಂದ ತನ್ನ ಮದುವೆಯ ಮೆರವಣಿಗೆಯೊಂದಿಗೆ ಹೊರಡಲು ತಯಾರಿ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೇ ಗ್ರಾಮದ ಮಹಿಳೆ ವಧುವಿನ ವೇಷ ಧರಿಸಿ ಆತನ ಬಳಿಗೆ ಬಂದಿದ್ದಳು. ರಾಕೇಶನಿಗೆ ದೂರವಾಗದಂತೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾಳೆ. ಆದರೆ, ರಾಕೇಶ್ ಆಕೆಯ ಮಾತನ್ನು ಕೇಳದೆ ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಮಹಿಳೆ ಬಾಟಲಿಯನ್ನು ತೆಗೆದುಕೊಂಡು ವರನ ಮುಖದ ಮೇಲೆ ಆಸಿಡ್ ಎರಚಿದ್ದಾಳೆ. ವರನ ಹತ್ತಿರ ನಿಂತಿದ್ದ ಮೂವರು ಮಹಿಳೆಯರಿಗೂ ಸುಟ್ಟ ಗಾಯಗಳಾಗಿವೆ.
ವರ ಸೇರಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ. ವರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಮದುವೆಯ ಸ್ಥಳವನ್ನು ತಲುಪಿದ್ದು, ಅವನ ಮದುವೆ ಕಾರ್ಯಗಳು ಪೂರ್ಣಗೊಂಡಿವೆ.
ವರನ ಸಂಬಂಧಿಕರ ಕೈಗೆ ಸಿಕ್ಕಿಬಿದ್ದ ಮಹಿಳೆಗೆ ಥಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗಿದೆ. ಅಲ್ಲದೇ ಮಹಿಳೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ನಂತರ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.