150 ರೂಪಾಯಿ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬರ ಮೇಲೆ ಮನೆ ಮಾಲೀಕನ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಶನಿವಾರ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಘಟನೆಯ ವೀಡಿಯೊವನ್ನು ಸಾರ್ವಜನಿಕರೊಬ್ಬರು ರೆಕಾರ್ಡ್ ಮಾಡಿದ್ದು, ಇದರಲ್ಲಿ ಹಲ್ಲೆಕೋರ ಇ-ರಿಕ್ಷಾವನ್ನು ಒದೆಯುವುದು ಮತ್ತು ನಂತರ ಯುವತಿ ಇರುವ ಸ್ಥಳಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಆಗ ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.
ಯುವತಿ ಈಗ ಪೊಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿದ್ದು, ವಿಡಿಯೋ ಸಾಕ್ಷ್ಯವನ್ನು ನೀಡಿದ್ದಾಳೆ. ಆದರೆ, ಠಾಣೆಯಲ್ಲೂ ಪೊಲೀಸರು ತನಗೆ ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಹಿತಿಯ ಪ್ರಕಾರ, ಪೂಜಾ ಲೋಧಿ ಎಂಬ ಯುವತಿಯ ಮೇಲೆ 150 ರೂಪಾಯಿ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ಆಕೆಯ ಮನೆ ಮಾಲೀಕನ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.
ಬಾಡಿಗೆ ಮನೆ ಖಾಲಿ ಮಾಡಿದ ನಂತರ ಮನೆ ಮಾಲೀಕರ ಸಂಬಂಧಿಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೂಜಾ ಮತ್ತು ಆಕೆಯ ತಾಯಿ ಹೇಳಿಕೊಂಡಿದ್ದಾರೆ. ನಂತರ ಹಣ ನೀಡುವುದಾಗಿ ಪೂಜಾ ಹೇಳಿದಾಗ ಆಕ್ರೋಶಗೊಂಡಿದ್ದಾರೆ.
ಮನೆ ಮಾಲೀಕನ ಸಂಬಂಧಿ ಆನಂದ್ ಸೆಂಗಾರ್ ಇಬ್ಬರು ಮಹಿಳೆಯರೊಂದಿಗೆ ಸೇರಿ ಆಕೆಯ ಮೇಲೆ ಮುಷ್ಟಿ, ಕೋಲು, ಮಚ್ಚಿನಿಂದ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ನೆರೆಹೊರೆಯವರ ಇ-ರಿಕ್ಷಾವನ್ನೂ ಹಾನಿಗೊಳಿಸಿದ್ದಾರೆ.
ದಾಳಿಯ ನಂತರ, ಪೂಜಾ ತನ್ನ ಹೊಸ ಮನೆಗೆ ಓಡಿದ್ದು, ಆದರೆ, ಆನಂದ್ ಆಕೆಯ ಮನೆಗೆ ನುಗ್ಗಿ ಹಲ್ಲೆಯನ್ನು ಮುಂದುವರಿಸಿ, ಆಕೆಯ ಬಟ್ಟೆ ಬಿಚ್ಚುವ ಪ್ರಯತ್ನವನ್ನೂ ಮಾಡಿದ್ದಾನೆ. ಅದೃಷ್ಟವಶಾತ್, ನೆರೆಹೊರೆಯವರು ಮಧ್ಯಪ್ರವೇಶಿಸಿ ಅವಳನ್ನು ರಕ್ಷಿಸಿದ್ದಾರೆ.
ಬಳಿಕ ಪೂಜಾ ಪೊಲೀಸ್ ಠಾಣೆಗೆ ಹೋಗಿದ್ದು, ಆದರೆ ಆಕೆಯ ದೂರನ್ನು ನಿರ್ಲಕ್ಷಿಸಲಾಯಿತು. ಮಹಿಳಾ ಪೊಲೀಸ್ ಅಧಿಕಾರಿ ತನ್ನನ್ನು ಅಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಪೂಜಾ ಆರೋಪಿಸಿದ್ದಾರೆ.
ಹತಾಶಳಾದ ಪೂಜಾ ನಂತರ ಆನಂದ್ ಮತ್ತು ಮಹಿಳೆಯರು ತನ್ನ ಮೇಲೆ ಹಲ್ಲೆ ನಡೆಸಿ ಇ-ರಿಕ್ಷಾವನ್ನು ಹಾನಿಗೊಳಿಸಿರುವ ವಿಡಿಯೋ ಸಾಕ್ಷ್ಯವನ್ನು ಸಲ್ಲಿಸಿದ್ದಾರೆ. ದೃಶ್ಯಾವಳಿಗಳನ್ನು ನೋಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
#WATCH | MP: Landlord’s Relatives Beat Up Woman Over Rs 150 Debt in Gwalior; Visuals Surface#MPNews #MadhyaPradesh pic.twitter.com/dWixlZ3WAi
— Free Press Madhya Pradesh (@FreePressMP) December 15, 2024