ಶಿವಮೊಗ್ಗ: ವರದಕ್ಷಿಣೆಗಾಗಿ ಪತ್ನಿ ಪೀಡಿಸಿದ ವ್ಯಕ್ತಿಯೊಬ್ಬ ಆಕೆಯ ಬೆತ್ತಲೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಈ ಸಂಬಂಧ ರಿಪ್ಪನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಪತಿ ಸಲ್ಮಾನ್, ಮಾವ, ಅತ್ತೆ, ನಾದಿನಿ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾರೆ. ಹುಂಚ ಹೋಬಳಿಯ ಗ್ರಾಮವೊಂದರ ಸಂತ್ರಸ್ತೆ ಮತ್ತು ಶೃಂಗೇರಿಯ ಸಲ್ಮಾನ್ ನಡುವೆ 2021ರ ಮೇ 22ರಂದು ಮದುವೆಯಾಗಿದ್ದು, ಮದುವೆಯ ಸಂದರ್ಭದಲ್ಲಿ 20 ಗ್ರಾಂ ಬಂಗಾರ, 3 ಲಕ್ಷ ರೂಪಾಯಿ ವರದಕ್ಷಿಣೆ ನೀಡಲು ಯುವತಿಯ ತಂದೆ ಒಪ್ಪಿಕೊಂಡಿದ್ದರು. ಮದುವೆಗೆ ಮೊದಲೇ 2 ಲಕ್ಷ ರೂ. ಕ್ಯಾಶ್, 4 ಗ್ರಾಂ ಚಿನ್ನ ಮತ್ತು ಮದುವೆಯ ನಂತರ 90 ಗ್ರಾಂ ಚಿನ್ನ, ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದು, ಬಾಕಿ 1 ಲಕ್ಷ ರೂ. ವಿಚಾರದಲ್ಲಿ ಗಲಾಟೆಯಾಗಿ ಸಂಧಾನ ನಡೆಸಲಾಗಿತ್ತು.
ಕೆಲವು ತಿಂಗಳ ನಂತರ ವರದಕ್ಷಿಣೆಗಾಗಿ ಗಂಡನ ಮನೆಯವರು ಕಿರುಕುಳ ನೀಡಲಾರಂಭಿಸಿದ್ದರು. ಇದಕ್ಕೆ ಗಂಡ ಮತ್ತು ನಾದಿನಿ ಕುಮ್ಮಕ್ಕು ನೀಡಿ ಹಿಂಸೆ ನೀಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಪತ್ನಿಯ ಬೆತ್ತಲೆ ಕ್ಷಣಗಳ ವಿಡಿಯೋ ಮಾಡಿಕೊಂಡಿದ್ದ ಪತಿ ಅವುಗಳನ್ನು ಜಾಲತಾಣಕ್ಕೆ ಹರಿಬಿಡುವುದಾಗಿ ಮತ್ತು ಬೇರೆಯವರಿಗೆ ಕಳುಹಿಸುವುದಾಗಿ ಹಿಂಸೆ ನೀಡುತ್ತಿದ್ದ.
ಗಂಡನ ಮನೆಯವರ ಹಿಂಸೆ ತಾಳದೇ ಮಹಿಳೆ ತವರು ಮನೆಗೆ ಬಂದಿದ್ದು, ಅಲ್ಲಿಗೆ ಬಂದ ಪತಿ ಸಲ್ಮಾನ್ ತಲಾಖ್ ನೀಡಿ ವಾಪಸಾಗಿದ್ದಾನೆ. ನಂತರ ಫೋನ್ ಮಾಡಿ ವರಕ್ಷಿಣೆ ಕೊಡದಿದ್ದರೆ ಬೆತ್ತಲೆ ವಿಡಿಯೋ ಹರಿಬಿಡುತ್ತೇನೆ. ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ.