ರಾಜಸ್ಥಾನದ ಸೂರತ್‌ಗಢ್ ಸೂಪರ್ ಥರ್ಮಲ್ ಪವರ್ ಪ್ಲಾಂಟ್ ಬಳಿಯ ಲೆವೆಲ್ ಕ್ರಾಸಿಂಗ್‌ನಲ್ಲಿ ಕೇಂದ್ರ ಪೊಲೀಸ್ ಪಡೆಯ ಎಸ್‌ಯುವಿ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಿಸಿ ಟಿವಿ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಎಸ್‌ಯುವಿಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಮೂವರು ಸಿಬ್ಬಂದಿ ಇದ್ದರು. ಯಾವುದೇ ಸಾವು – ನೋವು ಸಂಭವಿಸಿಲ್ಲ.
ರೈಲು ಅಲ್ಲಿಗೆ ಬರುವ ಮೊದಲು ವಾಹನಗಳನ್ನು ತಡೆಯಲು ಲೆವೆಲ್ ಕ್ರಾಸಿಂಗ್‌ನಲ್ಲಿ ಬೂಮ್ ಬ್ಯಾರಿಯರ್‌ಗಳು ಇರಲಿಲ್ಲ ಎಂದು ದೃಶ್ಯಾವಳಿಗಳು ತೋರಿಸಿವೆ. ಅಪಘಾತಕ್ಕೆ ಕೆಲವು ಸೆಕೆಂಡುಗಳ ಮೊದಲು, ಎಸ್‌ಯುವಿ ಕ್ರಾಸಿಂಗ್ ಕಡೆಗೆ ತಿರುಗುತ್ತಿರುವುದು ಕಂಡುಬಂದಿದೆ. ಚಲಿಸುತ್ತಿರುವ ರೈಲಿನ ಬಗ್ಗೆ ಚಾಲಕನಿಗೆ ತಿಳಿದಿರಲಿಲ್ಲ ಎಂದು ವರದಿಗಳು ತಿಳಿಸಿವೆ.
ವಾಹನವು ಹಳಿಗಳನ್ನು ತಲುಪಿದಾಗ, ಸಿಐಎಸ್‌ಎಫ್‌ನ ವ್ಯಕ್ತಿಯೊಬ್ಬರು ಮುಂಭಾಗದ ಎಡ ಸೀಟಿನಿಂದ ಬೇಗನೆ ಹೊರಬಂದು ಓಡಿಹೋದರು. ಇತರ ಇಬ್ಬರು ಪ್ರಯಾಣಿಕರು ಹೊರಬರುವ ಮೊದಲು ರೈಲು ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ ಮತ್ತು ಹಲವಾರು ಮೀಟರ್‌ಗಳವರೆಗೆ ಎಳೆದೊಯ್ದಿದೆ. ಶುಕ್ರವಾರದಂದು ವಾಡಿಕೆಯ ಗಸ್ತು ತಿರುಗುವ ವೇಳೆ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.