ದೇಶಾದ್ಯಂತ ಮಳೆಯ ಅಬ್ಬರ ವಿಪರೀತವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಮಾಚಲದ ಕುಲುವಿನಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಅಂಗಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ನದಿಯೊಂದರ ದಡದ ಮೇಲಿದ್ದ ಅಂಗಡಿ ಸಾಲು ಕ್ಷಣ ಮಾತ್ರದಲ್ಲಿ ಕುಸಿದುಬಿಡುತ್ತದೆ. ವ್ಯಕ್ತಿಯೊಬ್ಬರು ಆ ಕ್ಷಣವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ತಮ್ಮ ಆತಂಕ ಹೊರ ಹಾಕುವುದನ್ನು ಅದರ ಹಿನ್ನೆಲೆ ದನಿಯಲ್ಲಿ ಕೇಳಬಹುದು.
ಹಿಮಾಚಲದ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ ಕುಲು ಜಿಲ್ಲೆಯಲ್ಲಿ ಮೇಘಸ್ಫೋಟದಿಂದಾಗಿ ಹತ್ತು ಅಂಗಡಿಗಳು ಮತ್ತು ಮೂರು ವಾಹನಗಳು ಕೊಚ್ಚಿಹೋಗಿವೆ. ಬೆಳಗ್ಗೆ 7.30ರ ಸುಮಾರಿಗೆ ಅಣ್ಣಿ ತಹಸಿಲ್ನ ದೆಯುತಿ ಗ್ರಾಮ ಪಂಚಾಯಿತಿಯಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇಲಾಖೆ ತಿಳಿಸಿದೆ.
ದೇವುತಿಯಲ್ಲಿನ ಹಳೆ ಬಸ್ ನಿಲ್ದಾಣ ಹಾಗೂ ಪಂಚಾಯಿತಿ ಕಟ್ಟಡವೂ ಕೊಚ್ಚಿಹೋಗುವ ಭೀತಿ ಎದುರಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಮಂಡಿ ಜಿಲ್ಲೆಯಲ್ಲಿ ಬೆಳಿಗ್ಗೆ ಭೂಕುಸಿತ ಸಂಭವಿಸಿದ ನಂತರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಕಟಾವುಲಾ ಮೂಲಕ ಸಂಚಾರ ಮಾರ್ಗ ಬದಲಾಯಿಸಲಾಗಿದೆ.