ಬೆಂಗಳೂರು : ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.
ರಾಜ್ಯದಲ್ಲಿ ಹಿಂದೂಗಳನ್ನು ವ್ಯವಸ್ಥಿತವಾಗಿ ಹಳಿಯುವ ಮತ್ತು ಅವರ ಮೇಲೆ ಸರ್ಕಾರಿ ಯಂತ್ರ ದುರ್ಬಳಕೆ ಮಾಡಿ ಆಕ್ರಮಿಸುವ ಕೆಲಸಕ್ಕೆ ಕೈ ಹಾಕಿದೆ. ಉಡುಪಿಯ ಕಾಲೇಜಿನಲ್ಲಿ ನಡೆದ ಅಮಾನುಷ ಘಟನೆ ಬಗ್ಗೆ ಸುಮ್ಮನಿರುವ ಸರ್ಕಾರವನ್ನು ಪ್ರಶ್ನಿಸಿದ, ಹಿಂದೂ ವಿದ್ಯಾರ್ಥಿಗಳ ಪರ ಧ್ವನಿಯಾದ ಉಡುಪಿಯ ನಿವಾಸಿ ರಶ್ಮಿ ಸಾಮಂತ ಎಂಬುವವರ ಮನೆಗೆ ತುಘಲಕ್ ಸರ್ಕಾರವು ಪೊಲೀಸರನ್ನು ಕಳುಹಿಸಿ ಬೆದರಿಸುವ ಕೆಲಸ ಮಾಡಿದೆ. ಸುಳ್ಳು ಸುದ್ದಿ ಎಂಬ ವೃಥಾ ಆರೋಪ ಹೊರಿಸಿ ರಶ್ಮಿ ಸಾಮಂತರವರ ಮನೆಗೆ ರಾತ್ರೋ ರಾತ್ರಿ ಅಕ್ರಮವಾಗಿ ಪೊಲೀಸರು ನುಗ್ಗಿ ಕಿರುಕುಳ ನೀಡಲು ಯಾವ ಕಾನೂನಿನಲ್ಲಿ ಅವಕಾಶವಿದೆ.? ಯಾವ ನ್ಯಾಯಾಲಯದ ಮೂಲಕ ವಾರೆಂಟ್ ಪಡೆದು ಪೊಲೀಸರು ಪರಿಶೀಲನೆ ಹೆಸರಲ್ಲಿ ದಬ್ಬಾಳಿಕೆ ನಡೆಸಿದ್ದಾರೆ? ಒಂದು ಟ್ವೀಟ್ ಮೂಲಕ ಸತ್ಯವನ್ನು ಬಹಿರಂಗಪಡಿಸಿದರೆ ತುಘಲಕ್ ಸರ್ಕಾರದ ಕಣ್ಣು ಕೆಂಪಾಗಿದ್ದು ಏಕೆ.?
ಸಿದ್ದರಾಮಯ್ಯರವರ ಸರ್ಕಾರ ಜಿಹಾದಿ ಮನಸ್ಥಿತಿಯ ಪಟಾಲಂಗಾಗಿ ಖುದ್ದು ಪೊಲೀಸರನ್ನು ಛೂ ಬಿಟ್ಟಿತ್ತೇ? ರಶ್ಮಿ ಪೋಷಕರಿಗೆ ರಾತ್ರಿ ವೇಳೆ ಪದೇ ಪದೆ ಕರೆ ಮಾಡಿ ಕಿರುಕುಳ ನೀಡಿದ್ದು ಕಾನೂನುಬಾಹಿರ..! ಒಲೈಕೆಗಾಗಿ ಸಿದ್ದರಾಮಯ್ಯರವರ ಸರ್ಕಾರ ಕಾನೂನು ಕೈಗೆತ್ತಿಕೊಂಡರೆ, ಯಾರೂ ಕೈಕಟ್ಟಿ ಕೂರುವುದಿಲ್ಲ. ನಿಮ್ಮ ವಿರುದ್ಧ ಹೋರಾಟ ಶತಸಿದ್ದ..! ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಶಾಸಕ ಬಸನಗೌಡ ಯತ್ನಾಳ್ ‘ ರಾತ್ರಿ ರಶ್ಮಿಯವರ ಮನೆಗೆ ಪೊಲೀಸರನ್ನು ಭಯಪಡಿಸಲು ಕಳಿಸಿದ್ರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಹೇಳಿದರೂ ಪೊಲೀಸ್ ಕಿರುಕುಳವಾ? ನಿಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ಕ್ರಮ ಕೈಗೊಳ್ಳಿ, ಅವರಿಗೆ ರಾಜಕೀಯ ಮಾಡಬೇಕಿದ್ರೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲುವುದಕ್ಕೆ ಹೇಳಿ ಎಂದು ಬಿಜೆಪಿ ನಾಯಕ ಬಸವಗೌಡ ಪಾಟೀಲ್ ಯತ್ನಾಳ್ ವಾಗ್ಧಾಳಿ ನಡೆಸಿದ್ದಾರೆ.
ಉಡುಪಿಯ ಕಾಲೇಜಿನಲ್ಲಿ ನಡೆದ ಅಮಾನುಷ ಘಟನೆ ಬಗ್ಗೆ ಸುಮ್ಮನಿರುವ ಸರ್ಕಾರವನ್ನು ಪ್ರಶ್ನಿಸಿದ, ಹಿಂದೂ ವಿದ್ಯಾರ್ಥಿಗಳ ಪರ ಧ್ವನಿಯಾದ ರಶ್ಮಿ ಅವರ ಮನೆಗೆ ರಾಜ್ಯದ ತುಘಲಕ್ ಸರ್ಕಾರವು ಪೋಲಿಸರನ್ನು ಕಳುಹಿಸಿ ಬೆದರಿಸುವ ತಂತ್ರ ಮಾಡಿದೆ! ಆದರೆ ಫೇಕ್ ನ್ಯೂಸ್ ಎಂದು ಸುಳ್ಳು ಹಬ್ಬಿಸುವರಿಗೆ ರಾಜ ಮರ್ಯಾದೆ ಕೊಡುತ್ತಿದೆ ರಾಜ್ಯ ಸರ್ಕಾರ ಎಂದು ನಳೀನ್ ಕುಮಾರ್ ಕಟೀಲ್ ವಾಗ್ಧಾಳಿ ನಡೆಸಿದ್ದಾರೆ.