ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ಸಾಕು ನಾಯಿ ದಾಳಿ ಮಾಡಿರುವ ಘಟನೆ ನಡೆದಿದೆ.
ಮಗು ತನ್ನ ತಾಯಿಯೊಂದಿಗೆ ಶಾಲೆಗೆ ಹೋಗುತ್ತಿತ್ತು. ಲಿಫ್ಟ್‌ನೊಳಗೆ ಓರ್ವ ವ್ಯಕ್ತಿ ತನ್ನ ಸಾಕುನಾಯಿಯನ್ನು ಲಿಫ್ಟ್ ನೊಳಗೆ ತಂದಿದ್ದ. ಸಿಸಿ ಕ್ಯಾಮೆರಾದಲ್ಲಿನ ದೃಶ್ಯಾವಳಿಗಳಲ್ಲಿ ನಾಯಿಯು ಮಗುವಿನ ಮೇಲೆ ದಾಳಿ ಮಾಡುವುದನ್ನು ತೋರಿಸುತ್ತದೆ. ಅದರ ಮಾಲೀಕರು ನಾಯಿಯನ್ನು ಎಳೆದುಕೊಳ್ಳುವಷ್ಟರಲ್ಲಿ ಬಾಲಕನ ಕೈಯನ್ನು ಕಚ್ಚಿದೆ.
ಶಾಲಾ ಬಾಲಕನಿಗೆ ನಾಲ್ಕು ಚುಚ್ಚುಮದ್ದುಗಳನ್ನು ಹಾಕಲಾಗಿದೆ. ಲಾ ರೆಸಿಡೆನ್ಶಿಯಾ ಸೊಸೈಟಿಯಲ್ಲಿ ನಡೆದ ಈ ಘಟನೆ ಅಲ್ಲಿ ವಾಸಿಸುವ ಇತರ ಕುಟುಂಬಗಳಲ್ಲಿ ಭಯ ಮತ್ತು ಅಸಮಾಧಾನವನ್ನು ಹುಟ್ಟುಹಾಕಿದೆ.
ನೋಯ್ಡಾ ಪ್ರಾಧಿಕಾರವು ಇತ್ತೀಚೆಗೆ ಸಾಕು ಪ್ರಾಣಿಗಳ ಬಗ್ಗೆ ನೀತಿಯನ್ನು ರೂಪಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳು ಅಥವಾ ಬೆಕ್ಕುಗಳನ್ನು ಜನವರಿ 31, 2022 ರೊಳಗೆ ನೋಂದಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ದಂಡದ ಅಪಾಯವನ್ನು ಎದುರಿಸಬೇಕಾಗುತ್ತದೆ. ಸಾಕು ನಾಯಿ ಅಥವಾ ಬೆಕ್ಕುಗಳಿಂದ ಯಾವುದೇ ಗಾಯ ಉಂಟಾದರೆ 10,000 ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ.
ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿಯ ಸಭೆಯಲ್ಲಿ, ಬೀದಿ / ಸಾಕು ನಾಯಿಗಳು / ಸಾಕು ಬೆಕ್ಕುಗಳಿಗೆ ನೋಯ್ಡಾ ಪ್ರಾಧಿಕಾರದ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನೋಯ್ಡಾ ಪ್ರದೇಶಕ್ಕಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಾಧಿಕಾರವು ನೀತಿಯನ್ನು ನಿರ್ಧರಿಸಿದೆ ಎಂದು ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿತು ಮಹೇಶ್ವರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಾಕು ನಾಯಿಗಳಿಗೆ ಕ್ರಿಮಿನಾಶಕ ಅಥವಾ ಆಂಟಿರೇಬಿಸ್ ಲಸಿಕೆಯನ್ನು ಸಹ ಕಡ್ಡಾಯಗೊಳಿಸಲಾಗಿದೆ ಎಂದು ಶ್ರೀಮತಿ ಮಹೇಶ್ವರಿ ಮಾಹಿತಿ ನೀಡಿದರು.