ನೀವು ಬಸ್ ನಲ್ಲೋ ಅಥವಾ ರೈಲಿನಲ್ಲೋ ಪ್ರಯಾಣಿಸುವಾಗ ಭಿಕ್ಷುಕರು ಅಥವಾ ದೇಣಿಗೆ ಕೇಳಿಕೊಂಡು ಬರುವ ದೃಶ್ಯ ಸಾಮಾನ್ಯ. ಇದೀಗ ವ್ಯಕ್ತಿಯೊಬ್ಬ ವಿಮಾನದಲ್ಲಿ ದೇಣಿಗೆ ನೀಡುವಂತೆ ಸಹ-ಪ್ರಯಾಣಿಕರಲ್ಲಿ ಕೇಳಿಕೊಂಡ ವಿಡಿಯೋ ವೈರಲ್ ಆಗಿದೆ.
ಹೌದು, ಪಾಕಿಸ್ತಾನಿ ವ್ಯಕ್ತಿಯೊಬ್ಬ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆ ಆ ವ್ಯಕ್ತಿ ತಾನು ಭಿಕ್ಷೆ ಬೇಡುತ್ತಿಲ್ಲ, ಬದಲಿಗೆ ಲಾಹೋರ್‌ನಲ್ಲಿ ಮದರಸಾ ನಿರ್ಮಿಸಲು ಹಣವನ್ನು ಸಂಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದಾನೆ.
ನೀಲಿ ಬಣ್ಣದ ಜಾಕೆಟ್, ಬಿಳಿ ಕುರ್ತಾ, ಪೈಜಾಮ ಧರಿಸಿದ ವ್ಯಕ್ತಿಯು ಇದ್ದಕ್ಕಿದ್ದಂತೆ ಎದ್ದು ನಿಂತು ಸಹ-ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಲು ಶುರು ಮಾಡಿದ್ದಾನೆ. ಮದರಸಾವನ್ನು ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದು, ದಾನ ಮಾಡಲು ಇಚ್ಛಿಸುವವರು ಹಣ ಕೊಡಬಹುದು ಎಂದು ಕೇಳಿಕೊಂಡಿದ್ದಾನೆ.
ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಹಣ ಕೇಳುತ್ತಿರುವ ಇಂತಹ ವ್ಯಕ್ತಿಯನ್ನು ಅನೇಕರು ಟೀಕಿಸಿದ್ದಾರೆ.
ಕೆಲವು ಬಳಕೆದಾರರು ಈ ವ್ಯಕ್ತಿಯನ್ನು ಇಂಟರ್ನೆಟ್ ಸೆನ್ಸೇಷನ್ ಅಖ್ತರ್ ಲಾವಾ ಎಂದು ಗುರುತಿಸಿದ್ದಾರೆ. ಈತ ಉದ್ಯಮಿ ಮತ್ತು ರಾಜಕಾರಣಿಯೂ ಆಗಿದ್ದಾನೆ ಎನ್ನಲಾಗಿದೆ. ಕಳೆದ ವರ್ಷ ತನ್ನ ಚಮತ್ಕಾರಿ ವಿಡಿಯೋಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ.