
ವೈರಲ್ ವೀಡಿಯೊದಲ್ಲಿ, ಅಣ್ಣಾಮಲೈ ತಮಿಳು ಭಾಷೆಯಲ್ಲಿ, “ಸಾವರ್ಕರ್ ಅವರು ಇಂಗ್ಲಿಷ್‌ನವರ ಬೂಟುಗಳನ್ನು ನೆಕ್ಕಿದರು” ಎಂಬುದಿದೆ.
11 ಸೆಕೆಂಡುಗಳ ವೀಡಿಯೊ ಕ್ಲಿಪ್‌ನಲ್ಲಿ ಅಣ್ಣಾಮಲೈ ಹೇಳಿಕೆ ಜೊತೆಗೆ ಮಲಯಾಳಂ ಚಲನಚಿತ್ರ ‘ಕಾಲಾಪಾನಿ’ ಯಲ್ಲಿ ನಟ ಮೋಹನ್ ಲಾಲ್ ಬ್ರಿಟಿಷ್ ಅಧಿಕಾರಿಯ ಬೂಟು ನೆಕ್ಕುತ್ತಿರುವ ದೃಶ್ಯ ಸಹ ಇದೆ. ಈ ವಿಡಿಯೋವನ್ನ ಹಂಚಿಕೊಂಡಿರುವ ಅನೇಕ ಇಂಟರ್ನೆಟ್ ಬಳಕೆದಾರರು, ಬಿಜೆಪಿ ಸೇರುವ ಮುನ್ನ ಅಣ್ಣಾಮಲೈ ಅವರು ಸಾವರ್ಕರ್ ಅವರ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. “ಕುರಿಮರಿ ಸಾವರ್ಕರ್ ಬಗ್ಗೆ ಸತ್ಯವನ್ನು ಅನಾವರಣಗೊಳಿಸಿತು……” ಎಂಬ ಶೀರ್ಷಿಕೆಯೊಂದಿಗೆ ಟೀಕಿಸಿದ್ದಾರೆ.
ಈ ವಿಡಿಯೋ ಸತ್ಯಾಸತ್ಯತೆಯನ್ನ ‘ ನ್ಯೂಸ್ ಮೀಟರ್’ ಪತ್ತೆಹಚ್ಚಿದ್ದು, ಇದು ಎಡಿಟ್ ಮಾಡಲಾದ ವಿಡಿಯೋ ಎಂಬುದು ಗೊತ್ತಾಗಿದೆ.
ಸಂಬಂಧಿತ ಪದಗಳನ್ನಷ್ಟೇ ಜೋಡಿಸಿ ಅಣ್ಣಾಮಲೈ, ಸಾವರ್ಕರ್ ಅವರನ್ನು ಟೀಕಿಸಿದ್ದಾರೆಂಬಂತೆ ತೋರಿಸಲಾಗಿದೆ. ಅಕ್ಟೋಬರ್ 2, 2021 ರಂದು ಬಿಡುಗಡೆಯಾಗಿದ್ದ ಸಾವರ್ಕರ್ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಸಾವರ್ಕರ್ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, “ತಮಿಳುನಾಡಿನಲ್ಲಿ ವೀರ್ ಸಾವರ್ಕರ್ ಬಗ್ಗೆ ಜನರು ಚರ್ಚಿಸಿದಾಗ ಅವರನ್ನು ತಕ್ಷಣವೇ ಟೀಕಿಸುತ್ತಾರೆ. ಅವರು ಕ್ಷಮಾಪಣೆ ಕೇಳಿದರೆಂದು ಹೇಳುತ್ತಾರೆ. ನಾನು ಆ ಪದವನ್ನು ಬಳಸಲು ಬಯಸುವುದಿಲ್ಲ. ತಮಿಳುನಾಡಿನಲ್ಲಿ ಅವರನ್ನು ಸಾಮಾನ್ಯವಾಗಿ ಬ್ರಿಟಿಷ್ ಬೂಟ್ ಲಿಕ್ಕರ್ ಎಂದು ಹೇಳುತ್ತಾರೆ. ವೀರ ಸಾವರ್ಕರ್ ಆಂಗ್ಲರ ಬೂಟುಗಳನ್ನು ನೆಕ್ಕಿದರು ಎಂದು ಜನರು ಹೇಳುತ್ತಾರೆ. ಆದರೆ ಆ ಕಾಮೆಂಟ್ ನಿಜವಾಗಿಯೂ ಮನುಷ್ಯನಿಗೆ ನ್ಯಾಯವನ್ನು ನೀಡುತ್ತದೆಯೇ? ” ಎಂದಿದ್ದಾರೆ.
ಆದರೆ ಇದರಲ್ಲಿ ಅಣ್ಣಾಮಲೈ ಅವರ ‘ಬೂಟ್ ಲಿಕ್’ ಹೇಳಿಕೆಯನ್ನು ಮಾತ್ರ ತೆಗೆದುಕೊಂಡು ಹೇಳಿಕೆಯ ಹಿಂದಿನ ಮತ್ತು ಮುಂದಿನ ಪದಗಳನ್ನು ತೆಗೆದು “ಸಾವರ್ಕರ್ ಅವರು ಇಂಗ್ಲಿಷ್‌ನವರ ಬೂಟುಗಳನ್ನು ನೆಕ್ಕಿದರು” ಎಂದು ಅಣ್ಣಾಮಲೈ ಹೇಳಿರುವಂತೆ ವಿಡಿಯೋ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ.
ಬಿಜೆಪಿ ಸೇರುವ ಮುನ್ನ ಅಣ್ಣಾಮಲೈ ಅವರು ಸಾವರ್ಕರ್ ಅವರ ಬಗ್ಗೆ ನಕಾರಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದರು ಎಂದು ಕ್ಲಿಪ್ ಶೇರ್ ಮಾಡುತ್ತಿರುವವರು ಹೇಳಿದ್ದಾರೆ.
ಆದಾಗ್ಯೂ ಅಣ್ಣಾಮಲೈ ಆಗಸ್ಟ್ 25, 2020 ರಂದು ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು ಅವರು ಪಕ್ಷಕ್ಕೆ ಸೇರಿದ ಒಂದು ವರ್ಷದ ನಂತರ 2021 ರ ವೀಡಿಯೊ ಇದಾಗಿದೆ.