ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ಬೆತ್ತಲೆಯಾಗಿ ಓಡಾಡುತ್ತಿರುವ ವಿಚಾರ ಪೊಲೀಸ್ ಅಂಗಳದಲ್ಲಿ ತಲೆ ಬಿಸಿಯನ್ನುಂಟು ಮಾಡಿದೆ. ರಾಂಪುರ ಬೀದಿಗಳಲ್ಲಿ ಬೆತ್ತಲೆಯಾಗಿ ಯುವತಿ ತಿರುಗಾಡುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಬೆತ್ತಲೆ ಯುವತಿಯ ಸಿಸಿ ಕ್ಯಾಮೆರಾ ವಿಡಿಯೋ ವೈರಲ್ ಆಗಿದ್ದು, ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದರೂ, ಪೊಲೀಸರು ಇನ್ನೂ ಆಕೆಯನ್ನು ಪತ್ತೆ ಹಚ್ಚಿಲ್ಲ.
ವರದಿಗಳ ಪ್ರಕಾರ ಜನವರಿ 29 ರಂದು ರಾತ್ರಿ ಬೆತ್ತಲೆ ಯುವತಿ, ಮನೆ ಬಾಗಿಲನ್ನು ತಟ್ಟಿದ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸುದ್ದಿ ಹರಡಿದ ತಕ್ಷಣ ಸಿಸಿ ಕ್ಯಾಮೆರಾ ವಿಡಿಯೋ ವೈರಲ್ ಆಗಿದೆ.
ಜನವರಿ 31 ರಂದು ರಾಂಪುರ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಯಿತು. ಆದರೆ ಪೊಲೀಸರು ಇನ್ನೂ ಯುವತಿ ಯಾರು, ಆಕೆ ಎಲ್ಲಿದ್ದಾರೆಂದು ಪತ್ತೆ ಮಾಡಿಲ್ಲ. ಸ್ಥಳೀಯ ನಿವಾಸಿಗಳು ದೂರು ನೀಡಿದ್ದು, ಯುವತಿಯು ಸುಮಾರು 25 ವರ್ಷ ವಯಸ್ಸಿನವಳಾಗಿದ್ದಾಳೆ ಎಂದಿದ್ದಾರೆ. ಆಕೆ ದೂರುದಾರರ ಮನೆಯಿಂದ ಹೊರಡುವಾಗ, ಯುವತಿಯನ್ನು ಇಬ್ಬರು ಬೈಕರ್‌ಗಳು ಹಿಂಬಾಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ರಾಂಪುರ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಯುವತಿಯನ್ನು ಎಲ್ಲಿಯಾದರೂ ಕಂಡರೆ ಅವರ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರು ಯುವತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರೆ, ಕೆಲವರು ಆಕೆ ಮಾನಸಿಕ ಅಸ್ವಸ್ಥರಾಗಿರಬಹುದು ಎಂದಿದ್ದಾರೆ.
ಆಕೆಯನ್ನು ಪತ್ತೆ ಹಚ್ಚಲು ವಿಫಲರಾದ ಪೊಲೀಸರನ್ನು ಕೆಲವರು ಪ್ರಶ್ನಿಸಿದ್ದಾರೆ. ಈ ಚಳಿಯಲ್ಲಿ ಬೆತ್ತಲೆಯಾಗಿ ನಡೆಯುವುದು ಅವಳಿಗೆ ನೋವಾಗಿರಬಹುದು ಎಂದೂ ಕೆಲವರು ಹೇಳಿದ್ದಾರೆ.