ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಗೆ ಹಲವು ವಿಧಗಳಲ್ಲಿ ವಿಶೇಷವಾಗಿತ್ತು. ಚೆನ್ನೈ ತಂಡದ ನಾಯಕನಾಗಿ ಐದನೇ ಬಾರಿ ಟ್ರೋಫಿ ಎತ್ತಿ ಹಿಡಿದ್ರು. ಅವರು ತಮ್ಮ ಕ್ರಿಕೆಟ್ ಜೀವನಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟಿದ್ದಾರೆ. ಇದೀಗ ಕ್ಯಾಪ್ಟನ್ ಕೂಲ್ ಎಂದೇ ಹೆಸರುಪಡೆದ ಎಂ.ಎಸ್. ಧೋನಿಯ ವಿಡಿಯೋವೊಂದು ವೈರಲ್ ಆಗಿದೆ.
ಎಂಎಸ್ ಧೋನಿ ಅವರು ದೀರ್ಘಕಾಲದಿಂದ ತಮ್ಮ ಎಡ ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿ, ಧೋನಿ ಮೈದಾನದಿಂದ ಹೊರಗೆ ನಡೆಯುವಾಗ ಕುಂಟುತ್ತಿರುವುದನ್ನು ನೀವು ಗಮನಿಸಿರಬಹುದು. ಅದರ ವಿಡಿಯೋ ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಧೋನಿ ಬ್ಯಾಟಿಂಗ್‌ಗೆ ಆಗಮಿಸುವ ಮುನ್ನ ಮೊಣಕಾಲುಗಳನ್ನು ಕಟ್ಟಿಕೊಳ್ಳುವುದನ್ನು ನೋಡಬಹುದು.
ದೀರ್ಘಕಾಲದಿಂದ ತಾವು ಗಾಯದಿಂದ ಬಳಲುತ್ತಿದ್ದರೂ ಇವ್ಯಾವುದನ್ನು ತೋರ್ಪಡಿಸಿಕೊಳ್ಳದೆ ಕ್ರಿಕೆಟ್ ಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುವುದಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳ ಕಣ್ಣನ್ನು ತೇವಗೊಳಿಸಿದೆ ಎಂದರೆ ತಪ್ಪಾಗಲಾರದು.
ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಟಿ 20 ಸ್ವರೂಪದಲ್ಲಿ ಅತ್ಯಂತ ಉದ್ದವಾದ ಪಂದ್ಯವಾಗಿತ್ತು. ಏಕೆಂದರೆ ಮಳೆಯ ಕಾರಣದಿಂದ ಅದನ್ನು ಮೂರು ದಿನಗಳವರೆಗೆ ವಿಸ್ತರಿಸಲಾಯಿತು. ಪಂದ್ಯವು ಸಿ ಎಸ್ ಕೆ ಪರವಾಗಿ ಇರಲಿಲ್ಲ. ಏಕೆಂದರೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಐಪಿಎಲ್ ಫೈನಲ್‌ನಲ್ಲಿ ಅತ್ಯಧಿಕ ಮೊತ್ತವನ್ನು ದಾಖಲಿಸಿತು. ಸಿ ಎಸ್ ಕೆ ಗೆ 15 ಓವರ್‌ಗಳಲ್ಲಿ 171 ರನ್‌ಗಳ ಗೆಲುವಿನ ಗುರಿಯನ್ನು ನಿಗದಿಪಡಿಸಲಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಉತ್ತಮವಾಗಿ ಆರಂಭ ಪಡೆದ್ರೆ, ಅಜಿಂಕ್ಯ ರಹಾನೆ ಮತ್ತು ಅಂಬಟಿ ರಾಯುಡು ಅವರಂತಹ ಬ್ಯಾಟ್ಸ್‌ಮನ್‌ಗಳು ಕೂಡ ಕೊಡುಗೆ ನೀಡಿದರು. ಆದರೂ, ಒಂದು ಹಂತದಲ್ಲಿ ಸಿ ಎಸ್ ಕೆ ಎರಡು ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಯ ಎರಡು ಓವರ್‌ಗಳಲ್ಲಿ 21 ರನ್‌ಗಳ ಅಗತ್ಯವಿತ್ತು. ಈ ವೇಳೆ ರವೀಂದ್ರ ಜಡೇಜಾ ಪಂದ್ಯವನ್ನು ಅತ್ಯಂತ ಸ್ಮರಣೀಯ ಶೈಲಿಯಲ್ಲಿ ಮುಗಿಸಿದರು. ಹೀಗಾಗಿ ಚೆನ್ನೈ ತಂಡ ಐದನೇ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಿತು.