ನವದೆಹಲಿ: ಆಮ್ ಆದ್ಮಿ ಪಕ್ಷ ಗಲಭೆಗಳನ್ನು ಸೃಷ್ಟಿಸುತ್ತದೆ ಮತ್ತು ಗೂಂಡಾಗಿರಿಯನ್ನು ಉತ್ತೇಜಿಸುತ್ತದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿರುವಂತೆ ಅವರ ಮಾತುಗಳನ್ನು ತಿರುಚಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಡಿಯೋದಲ್ಲಿ ಸಿಸೋಡಿಯಾ ಅವರು ಬಿಜೆಪಿ ಎಂದು ಹೇಳಿದ ಕಡೆಯೆಲ್ಲಾ ಎಎಪಿ ಪಕ್ಷ ಎಂದು ತಿರುಚಿರುವುದು ಕಂಡು ಬಂದಿದೆ. ಆದರೆ ನಿಜವಾದ ವಿಡಿಯೊದಲ್ಲಿ, ಬಿಜೆಪಿಯು ದೇಶಾದ್ಯಂತ ಅಶಾಂತಿಯನ್ನು ಪ್ರಚೋದಿಸುತ್ತಿರುವುದಕ್ಕೆ ಆ ಪಕ್ಷವನ್ನು ದೂಷಿಸುವುದನ್ನು ಕೇಳಬಹುದು.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಬಗ್ಗೆ ಜನರ ಅಭಿಪ್ರಾಯವನ್ನು ತಿಳಿಯಲು ಮೂರು ಪ್ರಶ್ನೆಗಳನ್ನು ಕೇಳಿ ಎರಡು ವಾರಗಳ ಕಾಲ ನಡೆಸಿದ್ದ ಸಮೀಕ್ಷೆಯ ವರದಿಯನ್ನು ತಿಳಿಸಲು ಮನೀಶ್ ಸಿಸೋಡಿಯಾ ಸುದ್ದಿಗೋಷ್ಟಿಯನ್ನು ಕರೆದಿದ್ದರು. ಅದರಲ್ಲಿ ಗೂಂಡಾಗಳು, ಅವಿದ್ಯಾವಂತರು ಯಾವ ಪಕ್ಷದಲ್ಲಿ ಹೆಚ್ಚು ? ಯಾವ ಪಕ್ಷದಿಂದ ಗಲಭೆ, ಗೂಂಡಾಗಿರಿ ಹೆಚ್ಚುತ್ತಿದೆ ಎಂಬ ಪ್ರಶ್ನೆಗಳಿದ್ದವು. ಇದರ ಬಗ್ಗೆ ವಿವರಿಸುವ ವಿಡಿಯೋವನ್ನು ತಿರುಚಲಾಗಿದೆ.
ಮನೀಶ್ ಸಿಸೋಡಿಯಾ ಅವರ ವಿಡಿಯೋವನ್ನು ಶ್ವೇತಾಂಕ್ ಎಂಬುವವರು, ಏನಿದು ? ದೊಡ್ಡ ತಪ್ಪು ? ಎಂಬ ಅಡಿಬರಹದಡಿ ಈ ಎರಡು ನಿಮಿಷಗಳ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಶ್ವೇತಾಂಕ್ ಅವರ ಖಾತೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಅಧಿಕೃತ ಖಾತೆ, ಬಿಜೆಪಿ ಸದಸ್ಯರು, ಸಚಿವರು ಅನುಸರಿಸುತ್ತಿದ್ದು, ಈ ವಿಡಿಯೋ 4800 ಕ್ಕೂ ಹೆಚ್ಚು ರೀ ಟ್ವೀಟ್ ಆಗಿದೆ. 11,000 ಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.
ಬಿಜೆಪಿ ವಕ್ತಾರರೂ ಈ ವಿಡಿಯೋವನ್ನು ಟ್ವೀಟ್ ಮಾಡಿ, ಸಿಸೋಡಿಯಾ ಅವರು ಮೊದಲ ಬಾರಿ ಸತ್ಯ ನುಡಿದಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಸಿಸೋಡಿಯಾ ಅವರ ಬೆಂಬಲಕ್ಕೆ ನಿಂತಿದ್ದು, ಸುಳ್ಳು ಸುದ್ದಿ ಹರಡುತ್ತಿರುವ ಶ್ವೇತಾಂಕ್ ಎಂಬುವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮತ್ತೊಬ್ಬರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶ್ವೇತಾಂಕ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
https://twitter.com/shwetankbhushan/status/1523137007110836225