ಮಗಳನ್ನು ಹೊಸ ಕಾಲೇಜಿಗೆ ಬಿಡುವಾಗ ತಂದೆಯೊಬ್ಬರು ಕಣ್ಣೀರು ಹಾಕುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗಳು ಪ್ರೇಕ್ಷಾ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.
“ಅವರು ನನ್ನನ್ನು ನಮ್ಮ ಕನಸಿನ ತಾಣವಾದ ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ಕಾಲೇಜಿಗೆ ಬಿಡಲು ಬಂದಿದ್ದರು. ಇದು ನನ್ನ ಮೊದಲ ದಿನವಾದ್ದರಿಂದ ನಾವು ಕ್ಯಾಂಪಸ್ ಅನ್ನು ಹುಡುಕುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ತಂದೆಯ ಕಣ್ಣುಗಳಲ್ಲಿ ಕಣ್ಣೀರು ಹರಿಯುವುದನ್ನು ನಾನು ಗಮನಿಸಿದೆ” ಎಂದು ಪ್ರೇಕ್ಷಾ ಬರೆದಿದ್ದಾರೆ.
ಈ ವಿಡಿಯೋ ಇದಾಗಲೇ ಎಂಟು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಪ್ಪನ ಪ್ರೀತಿಗೆ ನೆಟ್ಟಿಗರು ಮನಸೋತಿದ್ದು 10 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಮಗಳನ್ನು ದೂರ ಕಳಿಸುವಾಗ ಅಮ್ಮಳಾದವಳು ಸಹಜವಾಗಿ ಕಣ್ಣೀರು ಸುರಿಸುತ್ತಾಳೆ, ಆದರೆ ಅಪ್ಪನಾದವ ಎಲ್ಲಾ ನೋವುಗಳನ್ನೂ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾನೆ. ಆದರೆ ಈ ವಿಡಿಯೋದಲ್ಲಿ ತಂದೆ ಭಾವುಕರಾದ ಕಣ್ಣೀರ ಕೋಡಿ ಹರಿಸಿರುವುದನ್ನು ನೋಡಿದರೆ ಮಗಳ ಮೇಲಿನ ಮಮಕಾರ ಎಷ್ಟೆಂದು ಕಾಣಿಸುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.