ಮಕ್ಕಳ ಕೂದಲನ್ನು ಬಾಚುವುದು ಸುಲಭದ ಕೆಲಸವಲ್ಲ. ಮಕ್ಕಳಿಗೆ ದಿನಕ್ಕೊಂದು ರೀತಿಯಲ್ಲಿ ಕೇಶಾಲಂಕಾರ ಮಾಡಬಯಸುವ ಹಲವು ಅಮ್ಮಂದಿರಿದ್ದಾರೆ. ಇದಕ್ಕಾಗಿ ಯೂಟ್ಯೂಬ್ ಮೊರೆ ಕೂಡ ಹೋಗುತ್ತಾರೆ.
ಆದರೆ ಇಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಖುದ್ದು ಮಗಳೇ ಅಮ್ಮನಿಗೆ ತನ್ನ ಹೇರ್ಸ್ಟೈಲ್ ಹೇಗೆ ಇರಬೇಕು ಎಂದು ನಿರ್ದೇಶನ ನೀಡುತ್ತಿದ್ದಾಳೆ. ಆಕೆಯ ಅಮ್ಮ ಬಾಚುವ ಸಮಯದಲ್ಲಿ ಬಾಲಕಿ ಆಕೆಗೆ ನಿರ್ದೇಶನ ನೀಡುತ್ತಿರುವ ಕ್ಯೂಟ್ ವಿಡಿಯೋ ಇದಾಗಿದೆ.
ಹಾರ್ಮನಿ ಮತ್ತು ಹ್ಯಾನ್ಸೆಲ್ ಎಂಬುವವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಇಲ್ಲಿ ತಾಯಿ ತನ್ನ ಮಗಳ ಕೂದಲನ್ನು ಹೆಣೆಯುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಬಾಲಕಿ ತನಗೆ ಹೀಗೆ ಹೀಗೆ ಸ್ಟೈಲ್ ಮಾಡು ಎನ್ನುತ್ತಾಳೆ. ತಾಯಿ ಹೂಂಗುಟ್ಟುತ್ತಿದ್ದರೂ ಆಕೆ ತಾನು ಹೇಳಿದಂತೆ ಮಾಡುತ್ತಿಲ್ಲ ಎಂದು ಬಾಲಕಿಗೆ ತಿಳಿದು ಬಯ್ಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
“ನಿನ್ನೆ ನಾನು ಹೀಗೆಲ್ಲಾ ಮಾಡಲು ಹೇಳಿದ್ದೆ. ಆದರೆ ನೀವು ನೀವು ನನ್ನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ?” ಎಂದು ಬಾಲಕಿ ತಾಯಿಯ ಮೇಲೆ ಮುನಿಸು ತೋರಿಸುವ ಕ್ಯೂಟ್ ದೃಶ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಅನೇಕ ಅಮ್ಮಂದಿರು ತಮ್ಮ ಅನುಭವಗಳನ್ನೂ ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.