ಭಾರತದಲ್ಲಿ ಅದ್ಭುತ ಪ್ರಕೃತಿ ಸೌಂದರ್ಯಗಳಿಂದ ಕೂಡಿದ ಅನೇಕ ಸ್ಥಳಗಳಿವೆ. ಇತ್ತೀಚೆಗಷ್ಟೇ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ದೂದ್ ಸಾಗರ್ ಜಲಪಾತದ ಮುಂದೆ ರೈಲೊಂದು ಹಾದು ಹೋಗಿರುವ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು. ಇದೀಗ ಇಂಥದ್ದೇ ಮತ್ತೊಂದು ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ರೈಲ್ವೆ ಸಚಿವಾಲಯವು ಟ್ವಿಟ್ಟರ್‌ನಲ್ಲಿ ಸುಂದರವಾದ ವಿಡಿಯೋವನ್ನು ಹಂಚಿಕೊಂಡಿದೆ. ರಾಜಸ್ಥಾನದ ಸೊಂಪಾದ ದಾರಾ ಘಾಟ್‌ಗಳ ಅದ್ಭುತ ನೋಟವನ್ನು ಸಚಿವಾಲಯ ಹಂಚಿಕೊಂಡಿದ್ದು, ಈ ವಿಡಿಯೋ ಭಾರಿ ವೈರಲ್ ಆಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಾಜಸ್ಥಾನದ ದಾರಾ ಘಾಟ್‌ಗಳ ವಿಹಂಗಮ ನೋಟವನ್ನು ಕಾಣಬಹುದು. 41 ಸೆಕೆಂಡ್ ಗಳ ವಿಡಿಯೋದಲ್ಲಿ ಎಕ್ಸ್‌ಪ್ರೆಸ್ ರೈಲು ಅರಣ್ಯದ ಮೂಲಕ ಹಾದುಹೋಗಿದೆ. ಈ ರಮಣೀಯ ದೃಶ್ಯ ನೋಡುಗರ ಕಣ್ಮನ ಸೆಳೆದಿದೆ.
ಕೋಟಾ-ನಾಗ್ಡಾ ವಿಭಾಗದಲ್ಲಿ ದಾರಾ ಘಾಟ್‌ಗಳ ಭೂದೃಶ್ಯದ ಮೂಲಕ ಹಾದುಹೋಗುವ ಎಕ್ಸ್‌ಪ್ರೆಸ್ ರೈಲಿನ ವಿಹಂಗಮ ನೋಟಕ್ಕೆ ನೆಟ್ಟಿಗರು ಮಂತ್ರಮುಗ್ಧಗೊಂಡಿದ್ದಾರೆ.