ನವದೆಹಲಿ: ಬಸ್ಸೊಂದು ಕಂದಕಕ್ಕೆ ಬೀಳುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಬಸ್ ಚಾಲಕನ ನಿರ್ಲಕ್ಷ್ಯದಿಂದ ಮೇಘಾಲಯದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ವೈರಲ್ ವಿಡಿಯೋವನ್ನು ತನಿಖೆ ಮಾಡಿದ ವಿಶ್ವಸ್ ನ್ಯೂಸ್, ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.
ಹೌದು, ವೈರಲ್ ಆಗಿರುವ ವಿಡಿಯೋವು ಮೇಘಾಲಯದಲ್ಲ. ಅದು ಇಂಡೋನೇಷ್ಯಾದ ಮಧ್ಯ ಜಾವಾ ಪ್ರಾಂತ್ಯದಲ್ಲಿ ಸಂಭವಿಸಿದ ಬಸ್ ಅಪಘಾತದ ವಿಡಿಯೋ ಎಂದು ಕಂಡುಹಿಡಿಯಲಾಗಿದೆ. ಮೇ 7ರಂದು ಈ ದುರ್ಘಟನೆ ನಡೆದಿದ್ದು, ಇದೀಗ ಅಪಪ್ರಚಾರ ಮಾಡಲಾಗುತ್ತಿದೆ.
ವೈರಲ್ ಆಗುತ್ತಿರುವುದೇನು?
ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೇಘಾಲಯದಲ್ಲಿ ಡ್ರೈವರ್ ಚಹಾ ಕುಡಿಯಲು ಹೋಗಿದ್ದಾನೆ. ಈ ವೇಳೆ ಬಸ್ ಎಂಜಿನ್ ಆನ್ ಆಗಿದ್ದು, ಹ್ಯಾಂಡ್‌ಬ್ರೇಕ್ ಹಾಕಲು ಮರೆತಿದ್ದಾನೆ. ಹೀಗಾಗಿ ಬಸ್ ಹತ್ತಿರದಲ್ಲೇ ಇದ್ದ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಬರೆದಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಮೇಘಾಲಯದ ಘಟನೆ ಎಂದು ಅನೇಕ ಬಳಕೆದಾರರು ಟ್ವಿಟರ್ ಸೇರಿದಂತೆ ಇತರ ವೇದಿಕೆಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅಪಘಾತದ ಬಗ್ಗೆ ವಿಶ್ವಸ್ ನ್ಯೂಸ್ ಹುಡುಕಿದೆ. ಆದರೆ, ಮೇಘಾಲಯದಲ್ಲಿ ಇತ್ತೀಚಿನ ಯಾವುದೇ ಬಸ್ ಅಪಘಾತವನ್ನು ಉಲ್ಲೇಖಿಸಿದ ಯಾವುದೇ ಸುದ್ದಿ ವರದಿಯನ್ನು ಕಂಡುಹಿಡಿಯಲಾಗಲಿಲ್ಲ. ನಂತರ ಇನ್‌ವಿಡ್ ಟೂಲ್‌ನ ಸಹಾಯದಿಂದ ವಿಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಲಾಯ್ತು. ಈ ವೇಳೆ ಮೇ 7 ರಂದು ವೆಬ್‌ಸೈಟ್‌ವೊಂದರಲ್ಲಿ ಪ್ರಕಟವಾದ ವರದಿಯನ್ನು ಕಂಡುಕೊಳ್ಳಲಾಯಿತು. ಅದರಲ್ಲಿ ಬಳಸಿದ ಚಿತ್ರವು ವೈರಲ್ ವಿಡಿಯೋದ ದೃಶ್ಯಗಳಿಗೆ ಹೊಂದಿಕೆಯಾಗಿದೆ.
ಮೇ 7 ರಂದು ವೆಬ್‌ಸೈಟ್‌ವೊಂದರಲ್ಲಿ ಪ್ರಕಟವಾದ ವರದಿಯಲ್ಲಿ, ಇಂಡೋನೇಷ್ಯಾದಲ್ಲಿ ಅಪಘಾತ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಇಂಡೋನೇಷಿಯನ್ ಭಾಷೆಯಲ್ಲಿ ಬರೆದ ಈ ವರದಿಯನ್ನು ಗೂಗಲ್ ಅನುವಾದದ ಸಹಾಯದಿಂದ ಅನುವಾದಿಸಲಾಗಿದೆ. ಸುದ್ದಿ ವರದಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಇಂಡೋನೇಷ್ಯಾದ ಬೊಜೊಂಗ್ ಜಿಲ್ಲೆಯಲ್ಲಿ ಪ್ರವಾಸಿ ಬಸ್ ಕಮರಿಗೆ ಬಿದ್ದ ಘಟನೆ ಮೇ 7 ರಂದು ನಡೆದಿದೆ. ಈ ಘಟನೆ ಮಧ್ಯ ಜಾವಾ ಪ್ರಾಂತ್ಯದಲ್ಲಿ ನಡೆದಿದೆ. ಇದು ಇಂಡೋನೇಷ್ಯಾಕ್ಕೆ ಸಂಬಂಧಿಸಿದೆ ಎಂದು ದೃಢಪಡಿಸಲಾಗಿದೆ.
ಹುಡುಕಾಟದಲ್ಲಿ, ಟಿವಿ ಒನ್ ನ್ಯೂಸ್ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವಿಡಿಯೋವನ್ನು ಕಂಡುಕೊಳ್ಳಲಾಯಿತು. ಅದು ಇಂಡೋನೇಷ್ಯಾದಲ್ಲಿ ಬಸ್ ಅಪಘಾತದ ವಿಡಿಯೋ ಎಂದು ಉಲ್ಲೇಖಿಸಲಾಗಿದೆ. ಬಸ್ ಅಪಘಾತದ ಈ ವಿಡಿಯೋ ಮೇಘಾಲಯಕ್ಕೆ ಸಂಬಂಧಿಸಿದ್ದಲ್ಲ ಎಂಬುದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ವಿಶ್ವಸ್ ನ್ಯೂಸ್ ತಿಳಿಸಿದೆ.