
ಗುವಾಹಟಿ (ಅಸ್ಸಾಂ): ಉದ್ಯಾನವನಗಳು ಇರುವುದು ಕೇವಲ ಮಕ್ಕಳು ಆಟವಾಡಲು ಅಥವಾ ಅವರು ಆನಂದಿಸಲು ಅಂದುಕೊಂಡ್ರಾ ? ಹಾಗಿದ್ದರೆ ಅದು ತಪ್ಪು. ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ಈ ವಿಡಿಯೋವನ್ನು ಒಮ್ಮೆ ನೋಡಿದರೆ ನಿಮಗೇ ತಿಳಿಯುತ್ತೆ, ಉದ್ಯಾನವನಗಳು ಇರುವುದು ಕೇವಲ ಮನುಷ್ಯರ ಮನರಂಜನೆಗಾಗಿ ಅಲ್ಲ, ಬದಲಿಗೆ ಉದ್ಯಾನವನಗಳೆಂದರೆ ಪ್ರಾಣಿಗಳಿಗೂ ಬಲು ಪ್ರೀತಿ ಎಂದು.
ಅಸ್ಸಾಂನ ಅಮ್ಚಾಂಗ್ ವನ್ಯಜೀವಿ ಅಭಯಾರಣ್ಯದಲ್ಲಿರುವ ಆನೆಯ ಚೆಲ್ಲಾಟ ನೋಡಿದರೆ ಎಷ್ಟೊಂದು ಆನಂದವಾಗುತ್ತದೆ ಅಲ್ಲವೆ ? ಈ ಅಭಯಾರಣ್ಯದಲ್ಲಿರುವ ಆನೆ ಆಟವಾಡಲು ಅಸ್ಸಾಂನ ಗುವಾಹಟಿಯ ನಾರಂಗಿ ಸೇನಾ ಕಂಟೋನ್ಮೆಂಟ್‌ನಲ್ಲಿರುವ ಮಕ್ಕಳ ಉದ್ಯಾನವನಕ್ಕೆ ಪ್ರವೇಶಿಸಿದೆ.
ಉದ್ಯಾನವನದಲ್ಲಿರುವ ವಿವಿಧ ಆಟಿಕೆಗಳಿಂದ ಅದು ಆಡವಾಡುತ್ತಾ ಆನಂದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಉದ್ಯಾನವನಕ್ಕೆ ಭೇಟಿಕೊಟ್ಟ ವ್ಯಕ್ತಿಯೊಬ್ಬರು ಆನೆಯ ಆಟವನ್ನು ನೋಡಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗಾಗಲೇ ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ.