ಪ್ರಪಂಚವು ಪ್ರತಿದಿನ ಕೃತಕ ಬುದ್ಧಿಮತ್ತೆ ಮೇಲೆ ಸ್ವಲ್ಪ ಹೆಚ್ಚು ಅವಲಂಬಿತವಾಗಿದೆ. ಕೃತಕ ಬುದ್ಧಿಮತ್ತೆ ಬಂದಾಗಿನಿಂದ ಮಾನವನ ಕೆಲಸವನ್ನು ಕಿತ್ತುಕೊಳ್ಳುವ ಕೆಲಸವಾಗ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಷ್ಟೇ ಅಲ್ಲ, ಕೃತಕ ಬುದ್ಧಿಮತ್ತೆ ಮನುಷ್ಯನ ಕೆಲಸದ ಮೇಲೂ ಕಣ್ಣಿಟ್ಟಿದೆ. ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕೃತಕ ಬುದ್ಧಿಮತ್ತೆಯನ್ನು ಉದ್ಯೋಗಿಗಳ ಮೇಲೆ ಕಣ್ಣಿಡಲು ಬಳಸಿರುವುದು ಗಮನ ಸೆಳೆದಿದೆ. ಅಷ್ಟೇ ಅಲ್ಲ ಇದು ಉದ್ಯೋಗಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ .
ಕೆಲಸದ ಸಮಯದಲ್ಲಿ ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಕೃತಕ ಬುದ್ಧಿಮತ್ತೆ ಮೇಲ್ವಿಚಾರಣೆ ಮಾಡುವುದನ್ನು ಕಾಣಬಹುದು. ವೀಡಿಯೊದಲ್ಲಿ ಉದ್ಯೋಗಿ ತನ್ನ ಕುರ್ಚಿಯಿಂದ ಎದ್ದು ಹೋದ ಕೂಡಲೇ ಅವರು ಎಷ್ಟು ಹೊತ್ತು ಕೆಲಸ ಬಿಟ್ಟು ಹೋಗಿದ್ದಾರೆಂದು ಎಐ ಕ್ಷಣಗಣನೆ ಮಾಡಲು ಪ್ರಾರಂಭಿಸುತ್ತದೆ.
ವೀಡಿಯೊದ ಪ್ರಕಾರ ಕಂಪನಿಯು ಉದ್ಯೋಗಿಯ ಸಂಬಳವನ್ನು ಆತ/ ಆಕೆ ಡೆಸ್ಕ್ ನಿಂದ ಹೊರಹೋದ ಸಮಯಕ್ಕೆ ಕಡಿತಗೊಳಿಸಬಹುದು.
ಇದನ್ನು ನೋಡಿದ ನೆಟ್ಟಿಗರು ಕೃತಕ ಬುದ್ಧಿಮತ್ತೆ ಅಪ್ಲಿಕೇಷನ್ ಟೀಕಿಸಿದ್ದಾರೆ. ಅಂತಹ ವ್ಯವಸ್ಥೆಯನ್ನು ಹೊಂದಿರುವ ಸ್ಥಳದಲ್ಲಿ ಕೆಲಸ ಮಾಡುವುದು “s**t” ಎಂದು ಹೇಳಿಕೊಂಡಿದ್ದಾರೆ.
ಇಂತಹ ಸ್ಥಳದಲ್ಲಿ ಕೆಲಸ ಮಾಡುವುದು ಹೆಮ್ಮೆಪಡುವ ವಿಷಯವಲ್ಲ ಎಂದು ಮತ್ತೊಬ್ಬ ರೆಡ್ಡಿಟ್ ಬಳಕೆದಾರರು ಹೇಳಿದ್ದಾರೆ.
ಮತ್ತೊಬ್ಬರು ಇನ್ಮುಂದೆ “ನಾವು ನಟನೆಯ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಬೇಕು. ಏಕೆಂದರೆ ಅತ್ಯುತ್ತಮ ನಟರು ಮತ್ತು ನಟಿಯರು ಕೆಲಸದಲ್ಲಿ ಉಳಿಯುತ್ತಾರೆ ಎಂದು ತೋರುತ್ತದೆ” ಎಂದಿದ್ದಾರೆ.