ನೋಯ್ಡಾ: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಎತ್ತರದ ರಸ್ತೆಯ ಮಧ್ಯದಲ್ಲಿ ಐಷಾರಾಮಿ ಕಾರಿನಲ್ಲಿ ಆರು ಜನರ ಗುಂಪು ಬಂದೂಕುಗಳನ್ನು ಹಿಡಿದುಕೊಂಡು ಮದ್ಯ ಸೇವಿಸಿ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸ್ಥಳೀಯ ಪೊಲೀಸರ ಕಣ್ಣಿಗೂ ಬಿದ್ದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ವೈರಲ್ ಆಗಿರುವ ವಿಡಿಯೋಗಳಲ್ಲಿ ಪುರುಷರು ಕಾರಿನೊಳಗೆ ಕುಳಿತಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ರೈಫಲ್ ಅನ್ನು ಲೋಡ್ ಮಾಡುವುದನ್ನು ಮತ್ತು ಕಿಟಕಿಯ ಮೂಲಕ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಕಾಣಬಹುದು. ರಸ್ತೆಯಲ್ಲಿ ವಾಹನ ನಿಲ್ಲಿಸಿದ ಬಳಿಕ ಗುಂಪು ರಸ್ತೆಯಲ್ಲಿ ಮದ್ಯ ಸೇವಿಸಿ ಡ್ಯಾನ್ಸ್ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬನು ತನ್ನ ಕುತ್ತಿಗೆಯಲ್ಲಿ ಎರಡು ರೈಫಲ್‌ಗಳನ್ನು ನೇತುಹಾಕಿಕೊಂಡು ನೃತ್ಯ ಮಾಡುವುದನ್ನು ಕಾಣಬಹುದು.
ಇಬ್ಬರು ವ್ಯಕ್ತಿಗಳು ಇಡೀ ಕೃತ್ಯದ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಪೊಲೀಸರು ಕಾರಿನ ಮಾಲೀಕರನ್ನು ಗುರುತಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕಾರು ನಗರದ ಚಿರಂಜೀವ್ ವಿಹಾರ್ ನಿವಾಸಿ ರಾಜಾ ಚೌಧರಿ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಭಾಗಿಯಾಗಿರುವ ಈತನ ಹಾಗೂ ಇತರರ ವಿರುದ್ಧ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರದಲ್ಲಿ ಮುಂದಿನ ಕ್ರಮ ನಡೆಯುತ್ತಿದೆ.