ಚೆನ್ನೈ: ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಜಿಮ್ನಲ್ಲಿ ವರ್ಕ್‌ಔಟ್ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಇವರು ವರ್ಕ್‌ಔಟ್ ಮಾಡಿರುವುದಕ್ಕಿಂತ ಹೆಚ್ಚಾಗಿ ಇವರ ಸುದ್ದಿ ಹೆಚ್ಚು ವೈರಲ್ ಆಗಲು ಕಾರಣ ಏನೆಂದರೆ ಸೀರೆಯಲ್ಲಿಯೇ ಇವರು ಮಿಂಚಿದ್ದಾರೆ. ಮಹಿಳೆ ಭಾರವಾದ ತೂಕದ ಡಂಬ್ಬೆಲ್ಸ್ ಮತ್ತು ಇತರ ಹಲವಾರು ಜಿಮ್ ಯಂತ್ರಗಳು ಮತ್ತು ಸಲಕರಣೆಗಳನ್ನು ಎತ್ತುವುದನ್ನು ವಿಡಿಯೋದಲ್ಲಿ ಕಾಣಬಹುದು.
ಹ್ಯೂಮನ್ಸ್ ಆಫ್ ಮದ್ರಾಸ್ ಮತ್ತು ಮದ್ರಾಸ್ ಬಾರ್ಬೆಲ್ ಜಂಟಿಯಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿವೆ. ಸಾಮಾನ್ಯವಾಗಿ ಜಿಮ್, ವರ್ಕ್‌ಔಟ್ ಎಂದಾಕ್ಷಣ ಇಂಥದ್ದೇ ಡ್ರೆಸ್ ಇರಬೇಕು, ಈಜುಡುಗೆ ರೀತಿಯ ಡ್ರೆಸ್ ಧರಿಸಿದಷ್ಟೇ ಇವುಗಳನ್ನು ಮಾಡಲು ಸಾಧ್ಯ ಎನ್ನುವ ಮನೋಭಾವ ಇದೆ. ಆದರೆ ಈ ಮಹಿಳೆ ಸೀರೆಯಲ್ಲಿಯೇ ಎಲ್ಲವನ್ನೂ ಸಾಧಿಸಿ ತೋರಿಸಿದ್ದಾರೆ.
ಸಾಧನೆಗೆ ಡ್ರೆಸ್ ಅಲ್ಲ, ಬದಲಿಗೆ ಮನಸ್ಸು ಅಗತ್ಯ ಎಂಬ ಸಂದೇಶ ಈ ವಿಡಿಯೋದಲ್ಲಿದೆ. “ನನಗೆ ಈಗ 56 ವರ್ಷ, ಇನ್ನೂ ವರ್ಕ್‌ಔಟ್ ಮಾಡುವುದನ್ನು ಮುಂದುವರಿಸಿದ್ದೇನೆ. ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡುವುದನ್ನು ಉಡುಗೆ ತಡೆಯಬಾರದು” ಎಂದಿದ್ದಾರೆ ಮಹಿಳೆ.
ನನ್ನ ಸೊಸೆ ಮತ್ತು ನಾನು ನಿಯಮಿತವಾಗಿ ವ್ಯಾಯಾಮ ಮಾಡುತ್ತೇವೆ. ನಾನು ಮೊದಲ ಬಾರಿಗೆ ಜಿಮ್‌ಗೆ ಬಂದಾಗ ನನಗೆ 52 ವರ್ಷ. ನಾನು ತೀವ್ರವಾದ ಮೊಣಕಾಲು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದೆ. ಎಷ್ಟೇ ಚಿಕಿತ್ಸೆ ಪಡೆದರೂ ಪ್ರಯೋಜನ ಆಗಲಿಲ್ಲ. ನಂತರ ಮಗನ ಸೂಚನೆ ಮೇರೆಗೆ ನಾನು ಇದನ್ನು ಪ್ರಾರಂಭಿಸಿದೆ, ಡ್ರೆಸ್ ಬಗ್ಗೆ ಚಿಂತಿಸಿದಾಗ ಸೀರೆಯುಟ್ಟೂ ಇದನ್ನು ಸಾಧಿಸಲು ಸಾಧ್ಯ ಎಂದು ನನಗೆ ಮನವರಿಕೆ ಆಯಿತು. ಈಗ ನಾನು ಆರೋಗ್ಯದಿಂದ ಇದ್ದೇನೆ ಎಂದಿದ್ದಾರೆ ಮಹಿಳೆ.