ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ವಿಡಿಯೋ ಒಂದು ವೈರಲ್ ಆಗಿದೆ. ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾಲಿನ ತೊಂದರೆ ಇದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ.
ಈ ಘಟನೆ ಆಗಸ್ಟ್ 15 ರಂದು ನಡೆದಿದ್ದು, ಪ್ರಯಾಣಿಕ ತಮ್ಮ ಮೊಬೈಲ್ ನಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭ ವೀಕ್ಷಿಸುತ್ತಿದ್ದರು. ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಆರಂಭವಾಗಿದ್ದು, ಇದನ್ನು ಕೇಳುತ್ತಲೇ ತಮಗೆ ನಿಲ್ಲಲು ಸಾಧ್ಯವಾಗದಷ್ಟು ಕಾಲು ನೋವಿದ್ದರೂ ಸಹ ಅಂತಹ ಪರಿಸ್ಥಿತಿಯಲ್ಲೂ ಅವರು ಎದ್ದುನಿಂತು ಗೌರವ ಸಲ್ಲಿಸಿದ್ದಾರೆ.
ಪ್ರಯಾಣಿಕ ಈ ಸಂದರ್ಭದಲ್ಲಿ ಇಯರ್ ಫೋನ್ ಬಳಸದಿದ್ದ ಕಾರಣ ರಾಷ್ಟ್ರಗೀತೆ ಅಲ್ಲಿದ್ದ ಎಲ್ಲರಿಗೂ ಕೇಳಿಸಿದ್ದು, ಆದರೆ ಬಹುತೇಕರು ಇದನ್ನು ಲೆಕ್ಕಿಸದೆ ತಮ್ಮ ಮೊಬೈಲ್ ಲೋಕದಲ್ಲಿಯೇ ಮುಳುಗಿದ್ದರು. ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ, ತಮ್ಮ ಮೊಬೈಲ್ ನಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸುತ್ತಿರುವ ಪ್ರಯಾಣಿಕನ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇದು ಈಗ ವೈರಲ್ ಆಗಿದೆ, ಅಲ್ಲದೆ ಎಲ್ಲರೂ ಸಹ ಆ ಪ್ರಯಾಣಿಕನ ದೇಶ ಪ್ರೇಮವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಜೊತೆಗೆ ರಾಷ್ಟ್ರಗೀತೆ ಕೇಳಿಸಿದರೂ ಸಹ ಅದಕ್ಕೆ ಗೌರವ ಸಲ್ಲಿಸದೆ ಕುಳಿತಿದ್ದ ಇತರ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.