ಭಾನುವಾರದಂದು ನೇಪಾಳದಲ್ಲಿ ವಿಮಾನ ಪತನಗೊಂಡು ವಿಮಾನ ಸಿಬ್ಬಂದಿಯೂ ಸೇರಿದಂತೆ ಅದರಲ್ಲಿದ್ದ 72 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಐವರು ಭಾರತೀಯರೂ ಸಹ ಸಾವಿಗೀಡಾಗಿದ್ದು, ಇವರೆಲ್ಲರೂ ಜನವರಿ 13ರಂದು ಕಠ್ಮಂಡುಗೆ ತೆರಳಿ ಪಶುಪತಿನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಆ ಬಳಿಕ ಪ್ಯಾರಾಗ್ಲೈಡಿಂಗ್ ಸಲುವಾಗಿ ಪೋಖಾರಗೆ ತೆರಳುತ್ತಿದ್ದರು ಎನ್ನಲಾಗಿದೆ.
ಸಾವನ್ನಪ್ಪಿದ ಐವರು ಭಾರತೀಯರ ಪೈಕಿ ಒಬ್ಬನಾದ 29 ವರ್ಷದ ಸೋನು ಜೈಸ್ವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದು, ತಾನು ವಿಮಾನ ಹತ್ತಿದ ಕ್ಷಣದಿಂದಲೂ ಫೇಸ್ಬುಕ್ನಲ್ಲಿ ಲೈವ್ ಮಾಡುತ್ತಿದ್ದ ಎನ್ನಲಾಗಿದೆ. ವಿಮಾನ ಪತನಗೊಳ್ಳುವ ಸಂದರ್ಭದಲ್ಲಿ ಈತ ಫೇಸ್ಬುಕ್ ಲೈವ್ ನಲ್ಲಿದ್ದು, ಇದರ ಮೂಲಕ ಅಂತಿಮ ಕ್ಷಣಗಳು ದಾಖಲಾಗಿದೆ. 1.30 ನಿಮಿಷದ ಈ ವಿಡಿಯೋದಲ್ಲಿ ತಾನು ಈ ಪ್ರಯಾಣವನ್ನು ಆನಂದಿಸುತ್ತಿದ್ದೇನೆ ಎಂದು ಸೋನು ಜೈಸ್ವಾಲ್ ಹೇಳುತ್ತಿದ್ದಾನೆ.
ಇದಾದ 58 ಸೆಕೆಂಡಿನ ಬಳಿಕ ವಿಮಾನ ಅಲುಗಾಡುತ್ತಿರುವುದು ದಾಖಲಾಗಿದೆ. ಕೆಲವೇ ಕ್ಷಣದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿದ್ದು, ಈ ಎಲ್ಲ ದೃಶ್ಯಾವಳಿ ಫೇಸ್ಬುಕ್ ಲೈವ್ ನಲ್ಲಿ ಪ್ರಸಾರವಾಗಿದೆ. ಮುಂದಿನ ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರೆಲ್ಲರೂ ಸಹ ಮೃತಪಟ್ಟಿದ್ದಾರೆ. ಮೃತಪಟ್ಟ 72 ಮಂದಿ ಪೈಕಿ ಐವರು ಭಾರತೀಯರು, 53 ಮಂದಿ ನೇಪಾಳಿಗಳು ಹಾಗೂ ನಾಲ್ವರು ರಷ್ಯಾದವರಿದ್ದಾರೆ. ಉಳಿದವರು ವಿಮಾನ ಸಿಬ್ಬಂದಿ ಎಂದು ತಿಳಿದುಬಂದಿದೆ.