ಪಂಜಾಬ್‌ನ ಜಲಂಧರ್‌ನಲ್ಲಿ ಭೀಕರ ದರೋಡೆ ಯತ್ನ ನಡೆದಿದೆ. ಶುಕ್ರವಾರ ಮಧ್ಯಾಹ್ನ 12.20ರ ಸುಮಾರಿಗೆ ಶ್ರೀ ಗುರು ಗೋಬಿಂದ್ ಸಿಂಗ್ ಅವೆನ್ಯೂದಲ್ಲಿರುವ ಮನೆಯೊಂದಕ್ಕೆ ಯುವಕನೊಬ್ಬ ಮಾರಕಾಸ್ತ್ರವಾದ ಕಠಾರಿಯೊಂದಿಗೆ ನುಗ್ಗಿದ್ದಾನೆ. ಮನೆಯಲ್ಲಿದ್ದ ಮಹಿಳೆಯರು ಕಿರುಚಾಡಿ ಹೊರಗೆ ಓಡಲು ಯತ್ನಿಸಿದ್ದಾರೆ. ಆದರೆ ಆರೋಪಿ ರಾಜನ್, 65 ವರ್ಷದ ನೀಲಂ ಗುಪ್ತಾ ಎಂಬ ವೃದ್ಧೆಯ ಬೆನ್ನಟ್ಟಿ ಆಕೆಯ ಕೈಗೆ ಕಠಾರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಮನೆಯ ಅಂಗಳದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಮಹಿಳೆಯು ಸಹಾಯಕ್ಕಾಗಿ ಕೂಗುತ್ತಿದ್ದ ಕಿರುಚಾಟವು ವಿಡಿಯೋದಲ್ಲಿ ಕೇಳಿಸುತ್ತದೆ.
ಗಾಯಗೊಂಡ ಮಹಿಳೆ ನೋವಿನಿಂದ ನರಳುತ್ತಿದ್ದರೆ, ಮನೆಯ ಮತ್ತೊಬ್ಬ ಮಹಿಳೆ ಆಕೆಯ ನೆರವಿಗೆ ಧಾವಿಸಿದ್ದಾರೆ. ಮನೆಯಲ್ಲಾದ ಗದ್ದಲ ಕೇಳಿ ನೆರೆಹೊರೆಯವರು ದರೋಡೆಕೋರನನ್ನು ಹಿಂಬಾಲಿಸಿದರಾದರೂ, ಆತ ಪರಾರಿಯಾಗಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಬಿಜೆಪಿ ನಾಯಕ ಮನೋಜ್ ಅಗರ್ವಾಲ್ ಗಾಯಗೊಂಡ ಮಹಿಳೆಯ ಕುಟುಂಬದವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು, ಭದ್ರತೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.